Kodagu

ಮಾಕುಟ್ಟ ಗಡಿಯಲ್ಲಿ ಅಕ್ರಮಕ್ಕೆ ಬ್ರೇಕ್;ದಾಖಲೆ ಇಲ್ಲದೆ ಕೆಂಪುಕಲ್ಲು ಸಾಗಿಸುತ್ತಿದ್ದ 2 ಲಾರಿ ವಶ - 98 ಸಾವಿರ ದಂಡ!

admincoorgdaily

ಕೆಂಪು ಕಲ್ಲು
ವೀರಾಜಪೇಟೆ: ಕೇರಳದಿಂದ ಕೊಡಗಿಗೆ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಜಾಲಕ್ಕೆ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಬ್ರೇಕ್ ಹಾಕಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಒಟ್ಟು ರೂ.98 ಸಾವಿರ ದಂಡ ವಿಧಿಸಿದ್ದಾರೆ.

ಮಾಕುಟ್ಟ ಮತ್ತು ಪೆರಂಬಾಡಿ ಗಡಿ ಚೆಕ್‌ಪೋಸ್ಟ್ ಮೂಲಕ ರಾತ್ರೋರಾತ್ರಿ ಅಕ್ರಮ ಕೆಂಪುಕಲ್ಲು ಸಾಗಾಟ ನಡೆಯುತ್ತಿದೆ ಎಂದು ಕೆಲ ದಿನಗಳಿಂದ ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರಗೊಳಿಸಿದ್ದರು.

ತಪಾಸಣೆ ವೇಳೆ ಕೇರಳ ನೋಂದಣಿಯ ಎರಡು ಲಾರಿಗಳಲ್ಲಿ ಅಕ್ರಮವಾಗಿ ಕೆಂಪುಕಲ್ಲು ತುಂಬಿ ಕೊಡಗು ಕಡೆಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ. ಚಾಲಕರ ಬಳಿ ಕಲ್ಲು ಸಾಗಾಟಕ್ಕೆ ಅಗತ್ಯವಿರುವ ಯಾವುದೇ ಪರವಾನಗಿ ಅಥವಾ ದಾಖಲೆ ಇರಲಿಲ್ಲ.

ಕೂಡಲೇ ಎರಡೂ ಲಾರಿಗಳನ್ನು ವಶಕ್ಕೆ ಪಡೆದು ವೀರಾಜಪೇಟೆ ಪೊಲೀಸ್ ಠಾಣೆಗೆ ರವಾನಿಸಲಾಗಿತ್ತು. ನಂತರ ಗಣಿ ಇಲಾಖೆ ಅಧಿಕಾರಿಗಳು ಒಂದು ಲಾರಿಗೆ ರೂ.57,000 ಮತ್ತು ಮತ್ತೊಂದು ಲಾರಿಗೆ ರೂ.41,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಪಾವತಿಸಿದ ನಂತರವೇ ಲಾರಿಗಳನ್ನು ಬಿಡುಗಡೆ ಮಾಡಲಾಗಿದೆ.