ಅಂಬೇಡ್ಕರ್‌ಗೆ ಅಪಮಾನ ಮಾಡಿದಾತನ ಗಡಿಪಾರು ಹಾಗೂ ಗಲ್ಲಿಗೇರಿಸಲು ಆಗ್ರಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ
admincoorgdaily

ಮಡಿಕೇರಿ: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿ ವಿಡಿಯೋ ಹರಿಬಿಟ್ಟು ಸಾಮಾಜಿಕ ಸ್ವಾಸ್ಥ್ಯ ಕದಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿತು.
ಇದು ವೈಯಕ್ತಿಕ ನಿಂದನೆಯಲ್ಲ, ಸಂವಿಧಾನ ಮತ್ತು ಸಮಾನತೆಯ ಆಶಯದ ಮೇಲಿನ ದಾಳಿ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ವಿಡಿಯೋ ವೈರಲ್ ಆಗುವುದನ್ನು ತಡೆದು, ಆರೋಪಿಯ ಹಿಂದಿನ ಪ್ರೇರಣೆ ಪತ್ತೆಗೆ ತನಿಖೆ ನಡೆಸಬೇಕು. ಆರೋಪಿಯನ್ನು ಗಡಿಪಾರು ಮಾಡಿ ಗಲ್ಲಿಗೇರಿಸಬೇಕು ಎಂಬ ತೀವ್ರ ಒತ್ತಾಯದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಮುಖಂಡರಾದ ಎಸ್.ಸಿ.ಸತೀಶ್, ಎಚ್.ಎಲ್.ದಿವಾಕರ್, ಡಿ.ಎಸ್.ನಿರ್ವಾಣಪ್ಪ, ಕೆ.ಬಿ.ರಾಜು, ಸುಶೀಲ ಸೇರಿದಂತೆ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.