ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ: ರಾಜ ಕಾಲುವೆ ಯಥಾ ಸ್ಥಿತಿ ಕಾಪಾಡುವಂತೆ ಸ್ಥಳೀಯರಿಂದ ಪ್ರತಿರೋಧ
admincoorgdaily


ಪೊನ್ನಂಪೇಟೆ, ಸೆ.9: ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದ ಗುಂಡತಕೊಲ್ಲಿ ಪೈಸಾರಿ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ, ವಸತಿ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಜಗದೀಶ್ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಪೊನ್ನಂಪೇಟೆ ಕಂದಾಯ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮತ್ತೂರು ಗ್ರಾಮದ ಮುಂಡತಕೊಲ್ಲಿ ಪೈಸಾರಿಯ ಸರ್ವೆ ನಂ.74/1ರ ಸುಮಾರು 3 ಎಕರೆ 20 ಸೆಂಟ್ ಸರ್ಕಾರಿ ಜಾಗದಲ್ಲಿ 25ಕ್ಕೂ ಅಧಿಕ ಕುಟುಂಬಗಳು ಕಳೆದ 30–40 ವರ್ಷಗಳಿಂದ ವಾಸಿಸುತ್ತಿದ್ದು, ಮನೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಹಾಗೂ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಭೂ ಮಾಪನ ಇಲಾಖೆಯ ಅಧಿಕಾರಿಗಳೊಂದಿಗೆ ಸರ್ವೆ ಮಾಡಲು ಮುಂದಾದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು.
ಈ ವೇಳೆ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಮೂಲಸೌಕರ್ಯಕ್ಕಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
“ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳ ಸಮಸ್ಯೆಗಳನ್ನು ಪರಿಶೀಲಿಸಿ, ಕನಿಷ್ಠ ಮೂಲಭೂತ ಸೌಲಭ್ಯಗಳೊಂದಿಗೆ ವಾಸಯೋಗ್ಯ ಮನೆಗಳನ್ನು ನಿರ್ಮಿಸಿಕೊಡಬೇಕು” ಎಂದು ಅವರು ಒತ್ತಾಯಿಸಿದರು. ಸರ್ಕಾರದ ಆದೇಶದಂತೆ ಇಂದು ಸರ್ವೆ ಮಾಡಿ 56 ಸೆಂಟ್ ರಾಜ ಕಾಲುವೆಯಲ್ಲಿ ಟೆಂಟ್ ನಿರ್ಮಿಸಿ ಉಳಿದ ಜಾಗವನ್ನು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಿ ಅಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು .
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಮಾತನಾಡಿ, ಸರ್ಕಾರಿ ಪೈಸಾರಿ ಜಾಗದಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಹಕ್ಕುಪತ್ರ, ಮನೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ಈ ಕುಟುಂಬಗಳು ಮೂಲಸೌಕರ್ಯಗಳಿಂದ ವಂಚಿತರಾಗಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
“ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲೆಯಾದ್ಯಂತ ಪೈಸಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು. ತಾಲೂಕು ಕಚೇರಿ ಹಾಗೂ ಸರ್ವೇ ಕಚೇರಿ ಎದುರು ಧರಣಿ, ಸತ್ಯಾಗ್ರಹ ನಡೆಸಬೇಕಾದ ಪರಿಸ್ಥಿತಿ ಎದುರಾದರೆ ಅದಕ್ಕೂ ಸಿದ್ಧ” ಎಂದು ಎಚ್ಚರಿಸಿದರು.
ಸರ್ವೆ ಕಾರ್ಯಕ್ಕೆ ಸ್ಥಳೀಯರ ವಿರೋಧ
ಈ ನಡುವೆ, ಸರ್ಕಾರದ ಆದೇಶದಂತೆ ಮುಂಡತಕೊಲ್ಲಿ ಸರ್ವೆ ನಂ.74/1ರ ಜಾಗದ ಸರ್ವೆ ನಡೆಸಿ ಅಲ್ಲಿನ ನಿವಾಸಿಗಳಿಗೆ ಜಾಗ ಹಂಚಿಕೆ ಮಾಡುವ ಪ್ರಕ್ರಿಯೆಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಯಿತು. ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಭೂ ಮಾಪನ ಅಧಿಕಾರಿ ಕುಚೇಲಪ್ಪ ಮಾತನಾಡಿ, ಮತ್ತೂರು ಗ್ರಾಮದ ರಾಜಕಾಲುವೆಯ ಸರ್ವೆ ನಡೆಸುವ ಕುರಿತು ಸ್ಥಳೀಯರಿಗೆ ಈಗಾಗಲೇ ನೋಟಿಸ್ ನೀಡಲಾಗಿತ್ತು. ಸರ್ವೆ ನಡೆಸಲು ಸ್ಥಳಕ್ಕೆ ಬಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಸಾರ್ವಜನಿಕರ ಸಂಚಾರ ಹಾಗೂ ನೀರು ಹರಿದುಹೋಗಲು ರಾಜಕಾಲುವೆಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ನಿವಾಸಿ ಕಾಡ್ಯಮಾಡ ಪೂಣಚ್ಚ ಮಾತನಾಡಿ, ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ನಿವೇಶನ ನೀಡುವುದಕ್ಕೆ ಸ್ಥಳೀಯರ ಯಾವುದೇ ಆಕ್ಷೇಪವಿಲ್ಲ. ಆದರೆ ರಾಜಕಾಲುವೆ ಪ್ರದೇಶದಲ್ಲಿ ಟೆಂಟ್‌ಗಳನ್ನು ಹಾಕಲು ಒಪ್ಪಲು ಸಾಧ್ಯವಿಲ್ಲ. ಸರ್ಕಾರಿ ಸರ್ವೆ ನಡೆಸಿ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ, ಕಾಲುವೆಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು. ಈ ಕ್ರಮಕ್ಕೆ ಸ್ಥಳೀಯರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸ್ಥಳೀಯರು, ದಲಿತ ಮುಖಂಡ ರಾಜು ಸೇರಿದಂತೆ, ನೂರಾರು ಪರಿಶಿಷ್ಟ ಪಂಗಡದ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.