ಕೈಮುಡಿಕೆ ಮಂದ್‌ನಲ್ಲಿ ಸಂಭ್ರಮದ ಪುತ್ತರಿ ಕೋಲ್ ಮಂದ್,ಮೂರು ನಾಡುಗಳ ಸಾಂಸ್ಕೃತಿಕ ಸಮ್ಮಿಲನ
admincoorgdaily

ಪೊನ್ನಂಪೇಟೆ: ಬೊಟ್ಟಿಯತ್‌ನಾಡ್, ಕುತ್ತ್ ನಾಡ್ ಹಾಗೂ ಬೇರಳಿನಾಡ್‌ಗಳ ಒಗ್ಗೂಡುವಿಕೆಯ ಸಂಕೇತವಾಗಿ ಕುಂದ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ಪುತ್ತರಿ ಕೋಲ್ ಮಂದ್‌ನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮೂರು ನಾಡುಗಳ ತಕ್ಕ ಮುಖ್ಯಸ್ಥರ ನೇತೃತ್ವದಲ್ಲಿ ಗ್ರಾಮಸ್ಥರು ಮಂದ್ ಪುಡಿಪೊದ ಮೂಲಕ ಚಾಲನೆ ನೀಡಿದರು. ಬಳಿಕ ತಳಿಯತಕ್ಕಿ ಬೊಳಿಚ ಹಾಗೂ ಒಡ್ಡೋಲಗದೊಂದಿಗೆ ಮಂದ್‌ಗೆ ಆಗಮಿಸಲಾಯಿತು. ಕುತ್‌ನಾಡ್‌ನ ಮಹಿಳೆಯರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಕೊಡವರು ಸೇರಿದಂತೆ ವಿವಿಧ ಜನಾಂಗದವರು ಒಗ್ಗೂಡಿ ಆಚರಿಸುವ ಇಂತಹ ಮಂದ್ ಕಾರ್ಯಕ್ರಮಗಳು ಕೊಡಗಿನ ಏಕತೆ ಮತ್ತು ಸೌಹಾರ್ದತೆಯ ಪ್ರತೀಕವಾಗಿವೆ. ಪರಸ್ಪರ ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಕೊಡಗಿನ ಸಂಸ್ಕೃತಿ, ಪದ್ಧತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯ. ಜನಾಂಗಗಳ ನಡುವೆ ಪ್ರತ್ಯೇಕತೆಯ ಭಾವನೆ ಮೂಡದೆ ಎಲ್ಲರೂ ಒಂದಾಗಿ ಸಾಗಬೇಕು ಎಂದರು.
ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕೃತಿ, ಭಾಷೆ, ಸಂಪ್ರದಾಯ ಹಾಗೂ ಜೀವನ ಮೌಲ್ಯಗಳನ್ನು ಕಲಿಸಬೇಕು. ಗೂಗಲ್ ಮತ್ತು ಪಠ್ಯಪುಸ್ತಕಗಳ ಮಾಹಿತಿಗಷ್ಟೇ ಸೀಮಿತವಾಗದೆ ಕೊಡಗಿನ ನೈಜ ಇತಿಹಾಸವನ್ನು ತಿಳಿದು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಮಂದ್‌ಗಳು ಕೊಡವರ ದೇವನೆಲೆ, ದೇವಕಾಡು, ಗುರುಕಾರಣ ಹಾಗೂ ಸಾಂಪ್ರದಾಯಿಕ ಜೀವನ ಪದ್ಧತಿಗಳೊಂದಿಗೆ ಬೆಸೆದುಕೊಂಡಿವೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಂತಹ ಮಹನೀಯರ ಆದರ್ಶ ಮತ್ತು ಸಾಧನೆಗಳನ್ನು ಯುವಜನತೆಗೆ ತಿಳಿಸಬೇಕು ಎಂದು ಹೇಳಿದರು.
ಮತ್ತೊಬ್ಬ ಸನ್ಮಾನಿತ ಅತಿಥಿ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪೃಥ್ಯು ಮಾತನಾಡಿ, ಕೊಡವ ಸಮುದಾಯದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಕಾವೇರಮ್ಮನ ಪವಿತ್ರ ನೆಲೆ ತಲಕಾವೇರಿಯ ಮೂಲ ಸಂಸ್ಕೃತಿ ಹಾಗೂ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮೂಂದ್‌ನಾಡ್ ಹಾಗೂ ಬೊಟ್ಟಿಯತ್‌ನಾಡ್‌ನ ತಕ್ಕ ಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತರಿ ಕೋಲ್ ಮಂದ್ ಕೊಡವರ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯುವಕ-ಯುವತಿಯರಿಗೆ ಹಿರಿಯರು ನಮ್ಮ ಆಚಾರ-ವಿಚಾರಗಳ ಮಹತ್ವವನ್ನು ತಿಳಿಸಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಮೂರು ನಾಡುಗಳ ಜನರು ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ಈ ಕೋಲ್ ಮಂದ್‌ನಲ್ಲಿ ಕೊಡವ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಜಾನಪದ ಕಲಾಪ್ರಕಾರಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಕೊಡವ ಸಾಹಿತ್ಯ, ಕಲೆ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಲನಿವಾಸಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಭೇದಭಾವವಿಲ್ಲದೆ ಪಾಲ್ಗೊಂಡಿದ್ದರು. ಮಹಿಳೆಯರು ಹಾಗೂ ಮಕ್ಕಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ ಗಮನ ಸೆಳೆದರು.
ಕಾರ್ಯಕ್ರಮದ ಅಂಗವಾಗಿ ಕೋಲಾಟ, ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಪರೆಯಕಳಿ, ಕತ್ತಿಯಾಟ್, ಎರವಾಟ್ ಹಾಗೂ ವಾಲಗತಾಟ್ ಸೇರಿದಂತೆ ವಿವಿಧ ಕೊಡವ ಸಾಂಪ್ರದಾಯಿಕ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು. ಕೊಡವ ಗುಂಪು ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಭಾಗವಹಿಸಿದವರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೂಂದ್‌ನಾಡ್ ಮಂದ್ ಸಮಿತಿಯ ಗೌರವ ಕಾರ್ಯದರ್ಶಿ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಕುತ್‌ನಾಡ್ ತಕ್ಕ ಪಂದಿಮಾಡ ರಮೇಶ್, ಚಮ್ಮಟ್ಟೀರ ಪ್ರವೀಣ್, ಅಪ್ಪಂಡೇರಂಡ ಮೋಹನ್, ನಾಮೇರ ದೀಪಕ್, ತೀತಮಾಡ ಶಿವಮಣಿ ಕರುಂಬಯ್ಯ, ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.