Kodagu

ಕೊಡವರ ಹಕ್ಕುಗಳ ಕುರಿತು ನಿರ್ಣಯವೇ? ಮಂತರ್, ಬೋಪಯ್ಯ ಸ್ಪಷ್ಟನೆ ನೀಡಲಿ: ಜಬ್ಬೂಮಿ ಟ್ರಸ್ಟ್‌ ಆಗ್ರಹ

admincoorgdaily

ಕೊಡವರ ಹಕ್ಕುಗಳ ಕುರಿತು ನಿರ್ಣಯವೇ? ಮಂತರ್, ಬೋಪಯ್ಯ ಸ್ಪಷ್ಟನೆ ನೀಡಲಿ: ಜಬ್ಬೂಮಿ ಟ್ರಸ್ಟ್‌ ಆಗ್ರಹ
ಮಡಿಕೇರಿ: ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಕೊಡವರ ಹಕ್ಕುಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಜಬ್ಬೂಮಿ ಟ್ರಸ್ಟ್ ಪ್ರಕಟಣೆ ಹೊರಡಿಸಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಡಾ. ಮಂತರ್ ಗೌಡ ಮತ್ತು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ನೇರ ಪ್ರಶ್ನೆ ಕೇಳಿದೆ.


ನಾವು ಕೊಡವರು ಯಾರೊಂದಿಗೂ ಸಂಘರ್ಷ ಬಯಸುವುದಿಲ್ಲ. ಯಾವುದೇ ಸಮುದಾಯದ ಹಕ್ಕುಗಳನ್ನು ಪ್ರಶ್ನಿಸುವುದು ನಮ್ಮ ಉದ್ದೇಶವಲ್ಲ. ಆದರೆ ನಮ್ಮ ಸಂವಿಧಾನಬದ್ಧ ಹಕ್ಕುಗಳ ಕುರಿತು ನಿರ್ಣಯವಾಗಿದ್ದರೆ ಪ್ರಶ್ನಿಸುವುದು ನಮ್ಮ ನ್ಯಾಯಸಮ್ಮತ ಹಕ್ಕು ಎಂದು ಟ್ರಸ್ಟ್ ಹೇಳಿದೆ.

ಗೌಡ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ನೀವು, ಅಲ್ಲಿ ಕೊಡವರ ಹಕ್ಕುಗಳ ಕುರಿತು ನಿರ್ಣಯವಾಗಿದೆ ಎಂಬುದು ನಿಮಗೆ ತಿಳಿದಿತ್ತೇ? ನಿಮ್ಮ ನಿಲುವು ಏನು? ಬೆಂಬಲಿಸುತ್ತೀರಾ ಅಥವಾ ವಿರೋಧಿಸುತ್ತೀರಾ? ಅದಕ್ಕೆ ಸಂವಿಧಾನಾತ್ಮಕ, ಕಾನೂನುಬದ್ಧ ಆಧಾರವಿದೆಯೇ? ಇದ್ದರೆ ಸಾರ್ವಜನಿಕವಾಗಿ ಇಡಲು ಸಿದ್ಧರಿದ್ದೀರಾ! ಎಂದು ಶಾಸಕ ಡಾ.ಮಂತರ್ ಗೌಡ ಅವರಿಗೆ ಪ್ರಶ್ನಿಸಿದ್ದಾರೆ.

 ನೀವು ಮಾಜಿ ಸಭಾಧ್ಯಕ್ಷರು, ಸಂವಿಧಾನಾತ್ಮಕ ಮೌಲ್ಯ ನಿಮಗೆ ಗೊತ್ತು. ಕೊಡವರ ಹಕ್ಕುಗಳ ವಿರುದ್ಧದ ನಿರ್ಣಯದ ಬಗ್ಗೆ ನಿಮ್ಮ ನಿಲುವು ಏನು? ಒಪ್ಪುತ್ತೀರಾ ಅಥವಾ ವಿರೋಧಿಸುತ್ತೀರಾ? ಒಪ್ಪುವುದಾದರೆ ಅದರ ಕಾನೂನು ಆಧಾರವೇನು? ಒಪ್ಪದಿದ್ದರೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಲು ಸಿದ್ಧರಿದ್ದೀರಾ‌ ಎಂದು ಮಾಜಿ ಶಾಸಕ‌ ಕೆ.ಜಿ‌ ಬೋಪಯ್ಯ ಅವರನ್ನು ಜಬ್ಬೂಮಿ ಟ್ರಸ್ಟ್ ಪ್ರಶ್ನಿಸಿದ್ದಾರೆ.

ಇದು ಕೊಡವ ಮತ್ತು ಗೌಡ ಸಂಘರ್ಷವಲ್ಲ, ಇದು ನಮ್ಮ ಹಕ್ಕಿನ ಪ್ರಶ್ನೆ. ಗೌಡ ಸಮುದಾಯಕ್ಕೆ ಅಭಿಪ್ರಾಯ ಹೇಳುವ ಹಕ್ಕಿದೆ, ಹಾಗೆಯೇ ನಮಗೂ ಪ್ರಶ್ನಿಸುವ ಹಕ್ಕಿದೆ. ಆ ನಿರ್ಣಯದ ಪೂರ್ಣ ಪಠ್ಯವನ್ನು ಸಾರ್ವಜನಿಕಗೊಳಿಸಬೇಕು ಮತ್ತು ಅದರ ಆಧಾರವನ್ನು ಜನರ ಮುಂದೆ ಇಡಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.

ನಾವು ವೈಯಕ್ತಿಕ ಆರೋಪ ಮಾಡುತ್ತಿಲ್ಲ, ಯಾರನ್ನೂ ಅವಮಾನಿಸುತ್ತಿಲ್ಲ. ನಾವು ಕೇಳುತ್ತಿರುವುದು ಒಂದೇ - ಸ್ಪಷ್ಟತೆ. ಕೊಡವರು ಕೇಳುತ್ತಿದ್ದಾರೆ, ಉತ್ತರ ನಿರೀಕ್ಷಿಸುತ್ತಿದ್ದಾರೆ,ಮೌನ ಬೇಡ, ಸ್ಪಷ್ಟನೆ ಬೇಕು ಎಂದು ಜಬ್ಬೂಮಿ ಟ್ರಸ್ಟ್ ಹೇಳಿದೆ.