ಅವಧಿ ಮುಗಿದ ಆಹಾರ ವಿತರಣೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ತೀರ್ಮಾನ
admincoorgdaily

ಕುಶಾಲನಗರ:ನೆಲ್ಯಾಹುದಿಕೇರಿಯ ಅಂಗನವಾಡಿಯೊಂದರಲ್ಲಿ ಬಾಣಂತಿಯರಿಗೆ ಅವಧಿ ಮುಗಿದ ಆಹಾರ ವಿತರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣಿ ಹಾಗೂ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ತಾಲ್ಲೂಕು ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆ
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ತೀರ್ಮಾನ ಕೈಗೊಳ್ಳಲಾಯಿತು.
ಮೇಲ್ವಿಚಾರಕಿ ಹಾಗೂ ಸಂಬಂಧಿಸಿದ ಅಧಿಕಾರಿಯ ನಿರ್ಲಕ್ಷ್ಯ, ಘಟನೆಗೆ ಕಾರಣವಾಗಿದ್ದು, ಇಂತಹ ಘಟನೆಗಳು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಹೆಬ್ಬಾಲೆ , ತೊರೆನೂರು ಹಾಗೂ ಶಿರಂಗಾಲ ಗ್ರಾಮಗಳ ಮಧ್ಯೆ ನೂತನ ವಿದ್ಯುತ್ ಉಪಶಾಖೆಯನ್ನು ತೆರೆಯುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ನೋಟೀಸ್ ನೀಡುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸೂಕ್ತ ಮಾಹಿತಿಯನ್ನು ನೀಡದ ಅಧಿಕಾರಿಗಳ ವಿರುದ್ಧ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಅನುಪಾಲನಾ ವರದಿಯನ್ನು ಪಡೆಯಲಾಯಿತು. ಆನಂತರ ಪಂಚ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಗತಿ ವರದಿಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಶಶಿಭೀಮಯ್ಯ, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಡಿ.ಅಣ್ಣಯ್ಯ, ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಕೃಷ್ಣೇಗೌಡ, ಅಬ್ದುಲ್ ರಜ಼ಾಕ್, ರಫೀಕ್ ಖಾನ್, ಫಿಲೋಮಿನಾ, ಎಂ.ಎ.ಆದಂ, ಶ್ರೀನಿವಾಸ್.ಎಸ್.ಎ, ಶ್ರೀನಿವಾಸ್ ಕುಮಾರ್.ಎನ್, ಮಲ್ಲಿಕಾರ್ಜುನ.ಬಿ.ಸಿ, ಯು.ಎಂ.ಕಿಶೋರ್ ಇದ್ದರು.