Kodagu

ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ಘೋಷಿಸಿ : ವಿಶ್ವ ತುಳುವ ಮಹಾಸಭಾ ಆಗ್ರಹ

admincoorgdaily

ಫೋಟೋ; ಐತಪ್ಪ ರೈ, ರಾಜೀವ, ರವಿ
ಮಡಿಕೇರಿ ಸೆ.10 : ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದರ ಜೊತೆಗೆ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವ ಕುರಿತು ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ವಿಶ್ವ ತುಳುವ ಮಹಾಸಭಾ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

ಚುನಾವಣಾ ಪೂರ್ವದಲ್ಲಿ ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತುಳು ಭಾಷೆಗೆ ಎರಡನೇ ಭಾಷೆಯ ಸ್ಥಾನಮಾನ ನೀಡುವುದಾಗಿ ಹಾಗೂ ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಮಹತ್ವದ ಆಶ್ವಾಸನೆಯನ್ನು ಈಡೇರಿಸಬೇಕು ಎಂದು ಕೊಡಗು ಜಿಲ್ಲಾ ತುಳು ಮಹಾಸಭಾ ಘಟಕದ ಅಧ್ಯಕ್ಷ ಬಿ.ಬಿ.ಐತಪ್ಪ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ ಲೋಚನ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಎಂ.ರವಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ತುಳು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸ್ವಂತ ಲಿಪಿ ಮತ್ತು ಕ್ಯಾಲೆಂಡರ್ ಹೊಂದಿರುವ ಶ್ರೀಮಂತ ಭಾಷೆಯಾಗಿದೆ. ಜಗತ್ತಿನಾದ್ಯಂತ ಎರಡು ಕೋಟಿಗೂ ಅಧಿಕ ತುಳು ಭಾಷಿಕರಿದ್ದು, ತುಳು ಕೇವಲ ಒಂದು ಭಾಷೆಯಲ್ಲ, ತುಳುವರ ಆಚಾರ-ವಿಚಾರ, ದೈವಾರಾಧನೆ ಮತ್ತು ಸಂಸ್ಕೃತಿಯ ಜೀವಾಳವಾಗಿದೆ. 

ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಸಾಧ್ಯಾಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಈ ಹಿಂದೆ ಡಾ.ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಮಗ್ರ ಅಧ್ಯಯನ ನಡೆಸಿ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಯಾವುದೇ ಅಡೆತಡೆಗಳಿಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. 

ಆದ್ದರಿಂದ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದು ಹಾಗೂ ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.