Kodagu

ಬೆಟೋಳಿ ಗ್ರಾಮದಲ್ಲಿ ರೈತರಿಗೆ ಜೀವಾಮೃತ ತಯಾರಿಕೆ ವಿಧಾನ ಕುರಿತು ಪ್ರಾತ್ಯಕ್ಷಿಕೆ

admincoorgdaily

ಬೆಟೋಳಿ ಗ್ರಾಮದಲ್ಲಿ ರೈತರಿಗೆ ಜೀವಾಮೃತ ತಯಾರಿಕೆ  ವಿಧಾನ  ಕುರಿತು ಪ್ರಾತ್ಯಕ್ಷಿಕೆ
ವಿರಾಜಪೇಟೆ;
ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯ ಗ್ರಾಮೀಣ ಕಾರ್ಯಾನುಭವ ಶಿಬಿರದ ವತಿಯಿಂದ  ಬೇಟೋಳಿ ಗ್ರಾಮದ  ರೈತ ವೇದಾತ್ಮ ಅವರ ಭತ್ತದ ಗದ್ದೆಯಲ್ಲಿ ರೈತರಿಗಾಗಿ ಜೀವಾಮೃತ ತಯಾರಿಕೆ ಕುರಿತು ವಿಧಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು  ಬುಧವಾರ ಆಯೋಜಿಸಲಾಯಿತು.

ಶಿಬಿರಾರ್ಥಿಗಳು ಪ್ರಾತ್ಯಕ್ಷಿಕೆಯಲ್ಲಿ ಜೀವಾಮೃತವನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸುವ ವಿಧಾನವನ್ನು ರೈತರಿಗೆ ಪ್ರಾಯೋಗಿಕವಾಗಿ ಪ್ರದರ್ಶಿಸಿದರು.  ಜೀವಾಮೃತ ತಯಾರಿಕೆಗೆ 20 ಕೆ.ಜಿ. ಸಗಣಿ, 15–20 ಲೀಟರ್ ಗೋಮೂತ್ರ, 2 ಕೆ.ಜಿ. ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯಗಳ ಹಿಟ್ಟು ಹಾಗೂ ಅದೇ ಗದ್ದೆಯ ಸ್ವಲ್ಪ ಮಣ್ಣನ್ನು ಬಳಸಿ ತಯಾರಿಸ ವಿಧಾನ ಹಾಗೂ   ಎಲ್ಲಾ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಜೀವಾಮೃತ ತಯಾರಿಸುವ ವಿಧಾನದ  ಬಗ್ಗೆ ತಿಳಿಸಲಾಯಿತು. ನಂತರ 
ಜೀವಾಮೃತದ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು, ಸೂಕ್ಷ್ಮಜೀವಿಗಳ ಚಟುವಟಿಕೆ ವೃದ್ಧಿಯಾಗುವುದು, ಬೆಳೆಗಳ ಬೆಳವಣಿಗೆ ಉತ್ತಮವಾಗುವುದು ಹಾಗೂ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುವುದು ಎಂಬ ಮಾಹಿತಿಯನ್ನು ರೈತರಿಗೆ ತಿಳಿಸಿದರು.

ಈ ಸಂದರ್ಭ  ರೈತರಾದ ವೇದಾತ್ಮ, ಜೀವನರಾಮ್, ಅಮೃತೇಶ್ವರ್, ಉದಯಶಂಕರ್, ಗೌರಿಶಂಕರ್, ರಾಮಶರ್ಮ, ಪ್ರಥಮ್, ರಕ್ಷಿತ್, ವಿದ್ಯಾಶ್ರೀ, ಕಲಾವತಿ ಹಾಗೂ  ಶಿಬಿರಾರ್ಥಿಗಳು ಉಪಸ್ಥಿತರಿದ್ದರು.