ಅರಣ್ಯ ನಿರ್ಬಂಧದಿಂದ ಮೂಲಸೌಕರ್ಯ ವಂಚಿತ: ಗೋಣಿಗದ್ದೆಯ 80 ಜೇನು ಕುರುಬ ಕುಟುಂಬಕ್ಕೆ ಪುನರ್ವಸತಿಗೆ ಮನವಿ
admincoorgdaily

ಬೆಂಗಳೂರು:ಗೋಣಿಗದ್ದೆ ಗ್ರಾಮವನ್ನು ಅರಣ್ಯದಿಂದ ಅಂಚಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘ ಮತ್ತು ಕರ್ನಾಟಕ ರೈತ ಸಂಘ (AIUKS) ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಶಾಸಕ ಪೊನ್ನಣ್ಣ ಅವರನ್ನು ಭೇಟಿಯಾದ ಗೋಣಿಗದ್ದೆ ಹಾಡಿ ನಿವಾಸಿಗಳು, ಸುಮಾರು 80 ಜೇನು ಕುರುಬ ಕುಟುಂಬಗಳು ಕಳೆದ 70 ವರ್ಷಗಳಿಂದ ಗೋಣಿಗದ್ದೆ ಹಾಡಿಯಲ್ಲಿ ವಾಸಿಸುತ್ತಿವೆ. ಅರಣ್ಯ ಇಲಾಖೆಯ ನಿರ್ಬಂಧದಿಂದಾಗಿ ಮೂಲಸೌಕರ್ಯ ಪಡೆಯಲು ತೊಂದರೆಯಾಗುತ್ತಿದೆ. ಆದ್ದರಿಂದ ತಮಗೆ ನೀಡಿರುವ ಹಕ್ಕು ಪತ್ರದಂತೆ ಅರಣ್ಯ ರಸ್ತೆಯ ಅಂಚಿನಲ್ಲಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ, ಸಿದ್ದು, ಅಣ್ಣಪ್ಪ ಉಪಸ್ಥಿತರಿದ್ದರು.