ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ, ಪಾರ್ಕಿಂಗ್ ಸಮಸ್ಯೆ; ಪರಿಹಾರಕ್ಕೆ ಕ.ರ.ವೇ ಸ್ವಾಭಿಮಾನಿ ಬಣದಿಂದ ಶಾಸಕರಿಗೆ ಮನವಿ
admincoorgdaily

ಸಿದ್ದಾಪುರ:
ನೆಲ್ಯಹುದಿಕೇರಿಯಲ್ಲಿ ತಲೆದೋರಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ
ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಶಾಸಕ ಡಾ : ಮಂತರ್ ಗೌಡರವರಿಗೆ ಮನವಿ ಸಲ್ಲಿಸಿದ್ದಾರೆ.
ನೆಲ್ಯಹುದಿಕೇರಿ ಗ್ರಾಮದ ಹಲವು ರಸ್ತೆಗಳು ತೀರಾ ಹದಗೆಟ್ಟಿದ್ದು ಬೆಟ್ಟದಕಾಡು, ಎಂ.ಜಿ. ಕಾಲೋನಿ, ಕುಂಬಾರಗುಂಡಿ ನಲ್ವತ್ತೆಕ್ರೆಯಿಂದ ಅತ್ತಿಮಂಗಲ ಕಡೆ ಬರುವ ರಸ್ತೆ ಹಾಗೂ ಬರಡಿ ಹಾಗೂ ಕಾರೆಬಾಣೆ ರಸ್ತೆ ಕೂಡ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಚಾಲಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ ತಿರುಗಾಡಲು ತುಂಬಾ ತೊಂದರೆಯಾಗಿದೆ. ಈ ರಸ್ತೆಗಳನ್ನು ದುರಸ್ತಿಪಡಿಸುವಂತೆ
ಶಾಸಕರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
ನೆಲ್ಯ ಹುದಿಕೇರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು ಹಲವರು PWD ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು ವಾಹನ ನಿಲುಗಡೆಗೊಳಿಸಲು ಜಾಗದ ಕೊರತೆ ಎದುರಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು
ನೆಲ್ಯ ಹುದಿಕೇರಿಯಲ್ಲಿ ಮೀನು ವ್ಯಾಪಾರಸ್ಥರು ಮೀನಿನ ತ್ಯಾಜ್ಯವನ್ನು ಚರಂಡಿ ಮೂಲಕ ಕಾವೇರಿ ನದಿಗೆ ಹರಿಯ ಬಿಡುತ್ತಿದ್ದು ಇದರಿಂದ ನದಿ ಕಲುಷಿತಗೊಳ್ಳುತ್ತಿರುವ ಕಾರಣ ಈ ಬಗ್ಗೆ ಕ್ರಮ ಜರುಗಿಸಬೇಕು. ತಾಜಾ ಮೀನಿನೊಂದಿಗೆ ಹಳತಾದ ಮೀನನ್ನು ಕೂಡ ಮಾರಾಟ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದ್ದು, ಈ ಕುರಿತು ಆಹಾರ ಇಲಾಖೆಯವರಿಗೆ ಖಡಕ್ ಸೂಚನೆ ನೀಡಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು.
ನೆಲ್ಯ ಹುದಿಕೇರಿಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಸಮಸ್ಯೆಯಾಗಿದೆ. ಆದ್ದರಿಂದ ಶೌಚಾಲಯ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ನೆಲ್ಯಹುದಿಕೇರಿಯಲ್ಲಿ ಕಾವೇರಿ ನದಿಗೆ ಜನನಿಬಿಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ತ್ಯಾಜ್ಯ ಹಾಗೂ ಮಲೀನ ನೀರನ್ನು ಹರಿಯಬಿಡುತ್ತಿದ್ದು, ಇದರಿಂದ ನದಿ ಮಲೀನವಾಗುತ್ತಿದೆ. ತ್ಯಾಜ್ಯ ಹಾಗೂ ಮಲೀನ ನೀರನ್ನು ಕಾವೇರಿ ನದಿಗೆ ಬಿಡದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕರಿಗೆ ಮನವಿ ಸಲ್ಲಿಸುವ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್, ಜಿಲ್ಲಾ ಉಪಾಧ್ಯಕ್ಷ ಸಜಿಲ್ ಕುಮಾರ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಸಫೀಕ್, ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ಹರೀಶ್ ನೆಲ್ಯಹುದಿಕೇರಿ ಘಟಕದ ಅಧ್ಯಕ್ಷರಾದ ಗಿರೀಶ್, ಕಾರ್ಯದರ್ಶಿ ದಿಲೀಪ್, ಉಪಾಧ್ಯಕ್ಷರಾದ ರಸಾದ್, ಸಹ ಕಾರ್ಯದರ್ಶಿ ನಂದ, ಘಟಕ ಸಲಹೆಗಾರ ಚಂದ್ರ, ಮಾಜಿ ಸೈನಿಕರು ಹಾಗೂ ಮಡಿಕೇರಿ ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ವೆಂಕಟೇಶ್, ಕಾರ್ಯಕರ್ತರುಗಳಾದ ಶಿವದಾಸ್, ಸಂತೋಷ್, ಕರ್ಪಯ್ಯ ಹಾಗೂ ಇತರರು ಉಪಸ್ಥಿತರಿದ್ದರು.