Kodagu

ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಪ್ರಮಾಣಕ್ಕೂ ಸಿದ್ಧ: ಜಿ.ಪಂ ಮೀಸಲಾತಿ ಆರೋಪಕ್ಕೆ ಕೆಪಿ ಚಂದ್ರಕಲಾ ತಿರುಗೇಟು

admincoorgdaily

ಚಂದ್ರಕಲಾ
ಮಡಕೇರಿ; ಜಿಲ್ಲಾ ಪಂಚಾಯತ್ ಕರಡು ಮೀಸಲಾತಿ ವಿಚಾರದಲ್ಲಿ ತಮ್ಮ ವಿರುದ್ಧ ವಾಟ್ಸ್‌ಆ್ಯಪ್‌ನಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ನಂಬಿಕೆ ಇದ್ದರೆ ಆರೋಪ ಮಾಡುವವರು ದೇವರ ಮುಂದೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಅವರು ಖಡಕ್ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರಡು ಮೀಸಲಾತಿ ಪಟ್ಟಿಯ ಬಗ್ಗೆ ತಮ್ಮ ವಿರುದ್ಧದ ಆರೋಪಗಳಿಗೆ ಸಮಗ್ರವಾಗಿ ಉತ್ತರಿಸಿದರು.
"ಇವತ್ತು ಕೆಲವರು ಬೆಳೆದಿದ್ದರೆ ಅದು ನನ್ನಿಂದ. ನಾನು ಕೆಲವರನ್ನು ಬೆಳೆಸಿದ್ದೇನೆ, ಆದರೆ ಅದನ್ನು ಅವರು ನೆನಪಿಸಿಕೊಳ್ಳುತ್ತಿಲ್ಲ. ನನ್ನ ಆತ್ಮೀಯರಿಗೆ ನಾನು ಯಾವತ್ತೂ ಮೋಸ ಮಾಡಿಲ್ಲ. ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕು. ವಾಟ್ಸ್‌ಆ್ಯಪ್‌ನಲ್ಲಿ ನನ್ನ ವಿರುದ್ಧ ಬರೆಯುವುದು ಸುಲಭ ಆದರೆ ‌ಕೆಲವರಿಗೆ ವಾಸ್ತವಾಂಶ ಗೊತ್ತಿಲ್ಲ ಎಂದರು.

ಜಿಲ್ಲಾ ಪಂಚಾಯತ್ ಮೀಸಲಾತಿಯಲ್ಲಿ ಯಾವ ಕ್ಷೇತ್ರದಲ್ಲೂ ನನ್ನ ಕೈವಾಡ ಇಲ್ಲ. ನಾನು ಕರ್ನಾಟಕ ಸರ್ಕಾರಕ್ಕೆ ಹತ್ತಿರ ಇರಬಹುದು, ಆದರೆ ಈಗ ಶಾಸಕರು ಇರುವಾಗ ನಮ್ಮಿಂದ ಏನೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಮೀಸಲಾತಿ ವಿಷಯದಲ್ಲಿ ನನ್ನನ್ನು ದೂಷಣೆಗೆ ಸಿಲುಕಿಸುವ ಅಗತ್ಯವಿಲ್ಲ. ನೇರವಾಗಿ ಶಾಸಕರ ಬಳಿ ಕೇಳಲಿ" ಎಂದರು.


ಕರಡು ಮೀಸಲಾತಿ ಪಟ್ಟಿ ನೋಡಿ ಎಲ್ಲರಿಗೂ ಬೇಸರವಾಗಿದೆ. ಕುಶಾಲನಗರ ತಾಲ್ಲೂಕಿನಲ್ಲಿ ಒಂದೇ ಒಂದು ಸಾಮಾನ್ಯ ಕ್ಷೇತ್ರ ಇಲ್ಲ, ಇದು ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು.ಮೂರು ಬಿಸಿಎಂ ಎ ನೀಡಿದ್ದಾರೆ. ಎಲ್ಲಾ ಸಮುದಾಯಕ್ಕೂ ಅವಕಾಶ ಸಿಗುವಂತೆ ಮೀಸಲಾತಿ ನಿಗದಿಯಾಗಬೇಕು. ಸಮಯ ಇದೆ, ಬದಲಾವಣೆ ಮಾಡಲು ಅವಕಾಶ ಇದೆ. ಖಂಡಿತ ಬದಲಾವಣೆ ಆಗಲಿದೆ. ವಿರಾಜಪೇಟೆ ಭಾಗದಲ್ಲಿ ಹೆಚ್ಚು ಸಾಮಾನ್ಯ ಕ್ಷೇತ್ರ ನೀಡಲಾಗಿದೆ, ಇದನ್ನು ಸರಿಪಡಿಬೇಕು,ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ಶಶಿಧರ್ ಅವರಿಗೆ ನಾನು ಅನ್ಯಾಯ ಮಾಡಿದ್ದೇನೆ ಎಂದು ಆರೋಪಿಸುವವರು ದೇವರ ಮುಂದೆ ಆಣೆ ಮಾಡಲಿ. ಕೂಡಿಗೆ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ನನ್ನಿಂದ ಸಾಧ್ಯವೇ? ನಾನು ಯಾರಿಗೂ ಇದುವರೆಗೆ ಅನ್ಯಾಯ ಮಾಡಲು ಹೋಗಿಲ್ಲ, ಅದರ ಅವಶ್ಯಕತೆಯೂ ಇಲ್ಲ" ಎಂದು ಸ್ಪಷ್ಟಪಡಿಸಿದರು.

"ನಾನು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಬೇಳೂರು-ಬಸವನಹಳ್ಳಿ, ಅಬ್ಬೂರುಕಟ್ಟೆ ಸೇರಿದಂತೆ ಬೇಕಾದಷ್ಟು ಅವಕಾಶಗಳಿವೆ. ನಾನು ಯಾವುದೇ ಒಂದು ಕ್ಷೇತ್ರಕ್ಕೆ ಅಂಟಿಕೊಂಡಿಲ್ಲ. ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದವಳು, ನನಗೆ ಜನ ಬೆಂಬಲ ಇದೆ" ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆಪಿ ಚಂದ್ರಕಲಾ ಅವರು ಹೇಳಿದರು.