Kodagu

ಕೊಡಗಿನಲ್ಲಿ ಮಧುಮೇಹ ಭೀತಿ;36 ಸಾವಿರಕ್ಕೂ ಹೆಚ್ಚು ಮಂದಿಗೆ ಡಯಾಬಿಟಿಸ್ ಪತ್ತೆ

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ:ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಿದೆ.

ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದಡಿ (ಎನ್‌ಪಿ-ಎನ್‌ಸಿಡಿ) 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ, ಕಾಯಿಲೆಯ ಆರಂಭಿಕ ಪತ್ತೆ ಹಾಗೂ ನಿರಂತರ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಲಕ್ಷಣಗಳ ಬಗ್ಗೆ ಎಚ್ಚರವಿರಲಿ:
ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವ ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದಿರುವ ಸಾಧ್ಯತೆಯಿದೆ. ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಹಸಿವು, ಸುಸ್ತು, ಅನಿರೀಕ್ಷಿತ ತೂಕ ಇಳಿಕೆ, ದೃಷ್ಟಿ ಮಂದವಾಗುವುದು ಹಾಗೂ ಗಾಯಗಳು ನಿಧಾನವಾಗಿ ವಾಸಿಯಾಗುವುದು ಪ್ರಮುಖ ಲಕ್ಷಣಗಳಾಗಿವೆ.

ತಪಾಸಣೆಯಲ್ಲಿ ಶೇ.87ರಷ್ಟು ಸಾಧನೆ:
2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಧುಮೇಹ ಪತ್ತೆಗಾಗಿ 2,31,796 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಇದು ನಿಗದಿತ ಗುರಿಯ ಶೇ.87ರಷ್ಟಾಗಿದೆ. ಈ ಅವಧಿಯಲ್ಲಿ ಒಟ್ಟು 36,247 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.

2026ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 85,101 ಮಂದಿಗೆ ತಪಾಸಣೆ ನಡೆಸಲಾಗಿದ್ದು, 4,464 ಮಂದಿಯಲ್ಲಿ ಹೊಸದಾಗಿ ಮಧುಮೇಹ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ 81,314 ಮಂದಿಗೆ ಅಧಿಕ ರಕ್ತದೊತ್ತಡ ತಪಾಸಣೆ ನಡೆಸಿ, 7,079 ಮಂದಿಯಲ್ಲಿ ಕಾಯಿಲೆ ಪತ್ತೆಹಚ್ಚಲಾಗಿದೆ.

ಶೇ.100ರಷ್ಟು ಚಿಕಿತ್ಸಾ ಅನುಸರಣೆ:
2026ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ವರದಿಯಂತೆ, ಜಿಲ್ಲೆಯಲ್ಲಿ 36,273 ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ. ಇವರಲ್ಲಿ 30,897 ಮಂದಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದು, ನಿಯಂತ್ರಣದ ಪ್ರಮಾಣ ಶೇ.85ರಷ್ಟಿದೆ.

ತಾಲ್ಲೂಕುವಾರು ನಿಯಂತ್ರಣ ಪ್ರಮಾಣ: ಮಡಿಕೇರಿ ಶೇ.81, ಸೋಮವಾರಪೇಟೆ ಶೇ.86, ಕುಶಾಲನಗರ ಶೇ.85, ವಿರಾಜಪೇಟೆ ಶೇ.86 ಹಾಗೂ ಪೊನ್ನಂಪೇಟೆ ಶೇ.88.

ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ:
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆ ಕಡಿಮೆ ಮಾಡಿ, ತರಕಾರಿ, ಸೊಪ್ಪು ಹಾಗೂ ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ನಡಿಗೆ ಅಥವಾ ವ್ಯಾಯಾಮ, ದೇಹದ ತೂಕ ನಿಯಂತ್ರಣ ಹಾಗೂ ವೈದ್ಯರ ಸಲಹೆಯಂತೆ ಔಷಧಿ ಪಡೆಯುವುದು ಮುಖ್ಯ. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ಎಚ್‌ಬಿಎ1ಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿ ನಿಲ್ಲಿಸಬಾರದು.

ವಿಶೇಷವಾಗಿ 30 ವರ್ಷ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಮಧುಮೇಹದ ಹಿನ್ನೆಲೆ ಹೊಂದಿರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಯಿಲೆ ಉಲ್ಬಣಿಸಿದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲೇ ಪತ್ತೆಹಚ್ಚಿ ನಿಯಂತ್ರಿಸುವುದು ಉತ್ತಮ ಎಂದು ಡಾ.ಶ್ರೀನಿವಾಸ್ ತಿಳಿಸಿದರು.

ಇತ್ತೀಚೆಗೆ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿಯಲ್ಲಿ ನಡೆದ ಪ್ರಜಾಸೇವಾ ಅಭಿಯಾನ ಸಂದರ್ಭದಲ್ಲಿ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಯಿತು.