Kodagu

ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ

admincoorgdaily

ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ
ಮಡಿಕೇರಿ:-ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ವೈಆರ್‍ಸಿ ಘಟಕಗಳ ಸಹಯೋಗದಲ್ಲಿ “ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮ”ವು ಸೋಮವಾರ ಕಾಲೇಜಿನಲ್ಲಿ ನಡೆಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎನ್‍ಡಿಆರ್‍ಎಫ್‍ನ ಇನ್ಸ್‍ಪೆಕ್ಟರ್ ಪ್ರದೀಪ್ ಕುಮಾರ್ ಅವರು ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಗಳ ಕುರಿತು ಮಹತ್ವದ ಮಾಹಿತಿ ನೀಡಿದರು.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ದೇಶದಾದ್ಯಂತ ವಿವಿಧ ರೀತಿಯ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. 

ಎನ್‍ಡಿಆರ್‍ಎಫ್ ತಂಡವು ಅಗತ್ಯ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಿದ್ದು, ಹಲವಾರು ವಿಪತ್ತು ಸಂದರ್ಭಗಳಲ್ಲಿ ಅನೇಕ ಅಮೂಲ್ಯ ಜೀವ ರಕ್ಷಿಸಿದೆ ಎಂದು ಹೇಳಿದರು.

ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಸಮುದಾಯದ ಜನರು ಸಾಮಾನ್ಯವಾಗಿ ಮೊದಲು ಸ್ಥಳದಲ್ಲೇ ಲಭ್ಯವಿರುವುದರಿಂದ, ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಿಸುವ ಮೂಲಭೂತ ಕೌಶಲ್ಯಗಳ ಕುರಿತು ಜ್ಞಾನ ಹೊಂದಿರುವುದು ಅತ್ಯಂತ ಅಗತ್ಯ ಎಂದು ಅವರು ತಿಳಿಸಿದರು. ಇಂತಹ ಜ್ಞಾನ ಮತ್ತು ತರಬೇತಿ ಹೊಂದಿರುವವರು ತುರ್ತು ಸಂದರ್ಭದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹಾಗೂ ಅಮೂಲ್ಯ ಜೀವಗಳನ್ನು ಉಳಿಸಲು ಸಹಕರಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಅಗತ್ಯ ತರಬೇತಿ ಪಡೆದು ಎನ್‍ಡಿಆರ್‍ಎಫ್ ಹಾಗೂ ಇತರ ರಕ್ಷಣಾ ತಂಡಗಳೊಂದಿಗೆ ಕೈಜೋಡಿಸಿ ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಎಂದು ಅವರು ಪ್ರೇರೇಪಿಸಿದರು.
ಎನ್‍ಡಿಆರ್‍ಎಫ್ ನ ರಕ್ಷಣಾ ಕಮಾಂಡರ್ ನಾಗರಾಜು ಎ.ಪಿ., ಅವರು ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಗಳ ಕುರಿತು ವಿವರವಾದ ತರಬೇತಿ ನೀಡಿದರು. 

 ಎನ್‍ಡಿಆರ್‍ಎಫ್ ತಂಡವು ವಿವಿಧ ವಿಪತ್ತು ಸಂದರ್ಭಗಳಲ್ಲಿ ಕೈಗೊಂಡ ರಕ್ಷಣಾ ಕಾರ್ಯಗಳ ಚಿತ್ರಗಳು ಹಾಗೂ ಉದಾಹರಣೆ ಸಹಿತಿ ಮಾಹಿತಿ ನೀಡಿ ಪ್ರವಾಹ, ಭೂಕುಸಿತ, ಭೂಕಂಪ, ಕಟ್ಟಡ ಕುಸಿತ ಹಾಗೂ ಇತರ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ವಿವಿಧ ವಿಪತ್ತು ಸಂದರ್ಭಗಳ ನೈಜ ಘಟನೆಗಳನ್ನು ವಿವರಿಸುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸಬೇಕು, ಯಾವ ಕ್ರಮ ಕೈಗೊಳ್ಳಬೇಕು ಮತ್ತು ಯಾವ ತಪ್ಪುಗಳನ್ನು ತಪ್ಪಿಸಬೇಕು ಎಂಬ ವಿದ್ಯಾರ್ಥಿಗಳಿಗೆ ವಿವರಿಸಿದರು. 

ವಿಪತ್ತು ಸಂಭವಿಸಿದಾಗ ಗಾಬರಿಯಾಗದೆ ಪರಿಸ್ಥಿತಿ ಅರ್ಥಮಾಡಿಕೊಳ್ಳುವುದು, ಮೊದಲು ಸ್ವಯಂ ಸುರಕ್ಷತೆ ಖಚಿತಪಡಿಸಿಕೊಳ್ಳುವುದು, ಅಗತ್ಯವಿದ್ದಲ್ಲಿ ಗಾಯಾಳುಗಳಿಗೆ ಸಹಾಯ ಮಾಡುವುದು ಹಾಗೂ ರಕ್ಷಣಾ ತಂಡಗಳಿಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳ ಬಗ್ಗೆ ವಿವರಿಸಿದರು.

ವಿಪತ್ತು ಸಂದರ್ಭದಲ್ಲಿ ಸಮಯಪ್ರಜ್ಞೆ, ಧೈರ್ಯ, ಶಿಸ್ತು, ತಂಡದ ಸಹಕಾರ ಮತ್ತು ಮಾನವೀಯತೆ ಅತ್ಯಂತ ಮುಖ್ಯ. ಜತೆಗೆ ವಿದ್ಯಾರ್ಥಿಗಳಿಗೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪೆÇ್ರ.ರಾಘವ ಬಿ. ಅವರು ತಮ್ಮ ಅಧ್ಯಕ್ಷೀಯ  ಭಾಷಣದಲ್ಲಿ ವಿಪತ್ತುಗಳು ನೈಸರ್ಗಿಕವಾಗಿರಲಿ ಅಥವಾ ಮಾನವ ನಿರ್ಮಿತವಾಗಿರಲಿ, ಅವು ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂದು ಹೇಳಿದರು. 

ಜೀವ ಮತ್ತು ಮರಣದ ನಡುವಿನ ಸೂಕ್ಷ್ಮ ಪರಿಸ್ಥಿತಿ ಎದುರಿಸಲು ನಾವು ಸದಾ ಸಿದ್ದರಾಗಿರಬೇಕು ಮತ್ತು ಜೀವ ರಕ್ಷಕ ತರಬೇತಿ ಪಡೆದಿರಬೇಕು ಎಂದು ತಿಳಿಸಿದರು.

 ವಿದ್ಯಾರ್ಥಿಗಳು ಇಂತಹ ತರಬೇತಿಗಳ ಮೂಲಕ ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡು, ವಿಪತ್ತು ಸಂದರ್ಭದಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿ ಜೀವಗಳನ್ನು ಉಳಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಶೈಲಶ್ರೀ ಕೆ. ಹಾಗೂ ಅಲೋಕ್ ಕೆ. ಬಿಜೈ, ಎನ್‍ಎಸ್‍ಎಸ್ ಮತ್ತು ವೈಆರ್‍ಸಿ ಘಟಕಗಳ ಕಾರ್ಯಕ್ರಮಾಧಿಕಾರಿಗಳು, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಎನ್‍ಡಿಆರ್‍ಎಫ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ವೈಆರ್‍ಸಿ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವು ಭುವನಾ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಎನ್‍ಸಿಸಿ ಕ್ಯಾಡೆಟ್ ಸಂದೇಶ್ ಅವರು ಸ್ವಾಗತ ಭಾಷಣ ಮಾಡಿದರು. 

ಕಾರ್ಯಕ್ರಮದ ಕೊನೆಯಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕಿ ಕುಮಾರಿ ಮೇಘಾ ಅವರು ವಂದನಾರ್ಪಣೆ ಸಲ್ಲಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಕವನಾ ಅವರು ಕಾರ್ಯಕ್ರಮದ ನಿರೂಪಣೆಯನ್ನು  ಯಶಸ್ವಿಯಾಗಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ವಿಪತ್ತು ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ, ಧೈರ್ಯದಿಂದ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. 

ಇದೇ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಸಿಬ್ಬಂದಿಗಳಿಂದ ಜೀವ ರಕ್ಷಕ ಸಾಮಗ್ರಿಗಳ ಕುರಿತು ಪ್ರದರ್ಶಿಸಲಾಯಿತು. ಹಾಗೂ ಅಪಘಾತ, ಅಗ್ನಿ ಅವಘಡ ಮತ್ತಿತರ ಸಂದರ್ಭದಲ್ಲಿ ಬಳಕೆಗೆ ಬರುವ ಪ್ರಥಮ ಚಿಕಿತ್ಸೆ, ಸಿಪಿಆರ್, ಇನ್ನಿತರ ವಿಕೋಪಗಳ ತುರ್ತು ಸಂದರ್ಭದಲ್ಲಿ ಪಾಲಿಸಬೇಕಾದ ಜೀವ ರಕ್ಷಕ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.