Kodagu

ಕೊಡಗಿನಲ್ಲಿ ಭತ್ತದ ಬೆಳೆಗೆ ರೋಗದ ಭೀತಿ: ಹತೋಟಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಮಾರ್ಗಸೂಚಿ

admincoorgdaily

ಕೊಡಗಿನಲ್ಲಿ ಭತ್ತದ ಬೆಳೆಗೆ ರೋಗದ ಭೀತಿ: ಹತೋಟಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಮಾರ್ಗಸೂಚಿ
ಮಡಿಕೇರಿ ಸೆ.29 (ಕರ್ನಾಟಕ ವಾರ್ತೆ): ಭತ್ತವು ಕೊಡಗು ಜಿಲ್ಲೆಯ ಬಹು ಮುಖ್ಯ ಆಹಾರ ಬೆಳೆಯಾಗಿದೆ. ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಪರಂಪರಾಗತವಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ.

ದಶಕಗಳ ಹಿಂದೆ ಅನ್ನದ ಬಟ್ಟಲು ಎಂದು ಕರೆಯುತ್ತಿದ್ದ ಜಿಲ್ಲೆಯಲ್ಲಿ, ದಿನ ಕಳೆದಂತೆ ಹಲವಾರು ಕಾರಣಗಳಿಂದ ಭತ್ತದ ಬೆಳೆಯು ತನ್ನ ಪ್ರಾಮುಖ್ಯತೆ ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲು ಬೇಕಾಗಿರುವ ಕದಿರನ್ನು ಸಹ ಭತ್ತ ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ಇಂದಿನ ದಿನದಲ್ಲಿ ಸಹಜವಾಗಿ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆ ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದು ಭತ್ತ ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದ್ದು, ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು ಕಂಡು ಬಂದಿದೆ.

ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಭತ್ತದ ನಾಟಿ ಕಾರ್ಯ ಬಹುತೇಕ ಮುಗಿದಿದ್ದು, ನಾಟಿ ಮಾಡಿ 30 ರಿಂದ 40 ದಿನಗಳಾಗಿರುವ ಈ ಸಂದರ್ಭದಲ್ಲಿ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆ ಸುರುಳಿ ಹುಳುವಿನ ಬಾಧೆ ಜಿಲ್ಲೆಯ ಐದು ತಾಲ್ಲೂಕುಗಳಾದ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆಗಳಲ್ಲಿ ಕಾಣಿಸಿಕೊಂಡಿದೆ. ಇದರ ಹತೋಟಿಗೆ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರ ಸಹಯೋಗದೊಂದಿಗೆ ಕೃಷಿ ಇಲಾಖೆ ಕೊಡಗು ಜಿಲ್ಲೆ ರೈತರಿಗೆ ಕೆಲವೊಂದು ಸಲಹೆ ನೀಡಿದೆ.

ಬೆಂಕಿ ರೋಗ: ರೋಗದ ಲಕ್ಷಣಗಳು ಪ್ರಾರಂಭದಲ್ಲಿ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗಿ ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಯು ಸುಟ್ಟು ಹೋದಂತೆ ಕಂಡುಬರುತ್ತದೆ.

ಹತೋಟಿ ವಿಧಾನಗಳು: ಗದ್ದೆಗಳಿಗೆ ಹೆಚ್ಚಿನ ಪ್ರಮಾಣದ ಯೂರಿಯಾ ಕೊಡಬಾರದು. ರೋಗದ ಬಾಧೆ ಇದ್ದಲ್ಲಿ ಶಿಲೀಂಧ್ರನಾಶಕಗಳಾದ ಟ್ರೈಪ್ಲೋಕ್ಸಿಸ್ಟ್ರೋಬಿನ್ + ಟೆಬುಕೋನಜೋಲ್ 0.5 ಗ್ರಾಂ ಅಥವಾ ಟ್ರೈಸೈಕ್ಲಜೋಲ್ 0.6 ಗ್ರಾಂ ಅಥವಾ ಅಜಾಕ್ಸಿಸ್ಟ್ರೋಬಿನ್ + ಡೈಫೆನ್ಕೋನಜೋಲ್ 1.0 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಸಿಂಪರಣೆ ಮಾಡುವಾಗ ಶಿಲೀಂಧ್ರನಾಶಕಕ್ಕೆ ಅಂಟು ದ್ರಾವಣವನ್ನು ಸೇರಿಸಿ ಸಿಂಪಡಿಸುವುದು ಉತ್ತಮ.

ಎಲೆ ಸುರುಳಿ ಹುಳು: ಎಲೆ ಸುರುಳಿ ಹುಳುವಿನ ಬಾಧೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದರೆ, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿಕೊಂಡಂತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಆದ್ದರಿಂದ ರೈತ ಬಾಂಧವರು ಈ ಕೀಟ ಬಾಧೆಯ ಲಕ್ಷಣಗಳು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದರೆ ಈ ಕ್ರಮಗಳನ್ನು ಕೂಡಲೇ ಅನುಸರಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿ ಮಾಡಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ಹನಿ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಈ ಎಲೆ ಸುರುಳಿ ಹುಳುವಿನ ಬಾಧೆ ತೀವ್ರವಾಗಿ ಹರಡಲು ಕಾರಣಗಳಾಗುತ್ತವೆ.

ಪತಂಗವು ತಿಳಿ ಹಳದಿ ಬಣ್ಣ ಹೊಂದಿದ್ದು ರೆಕ್ಕೆಗಳ ಮೇಲೆ ತೆಳುವಾದ ಕಪ್ಪು ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗ ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರ ರೇಖೆಯಲ್ಲಿ ಇಡುತ್ತದೆ. 4 ರಿಂದ 7 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು 15 ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ಕೋಶಾವಸ್ಥೆಯನ್ನು ಸೇರುತ್ತವೆ. ಆರರಿಂದ ಎಂಟು ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು ತದನಂತರ ಪ್ರೌಢಕೀಟವು ಹೊರ ಬರುತ್ತದೆ.

ಹತೋಟಿ ವಿಧಾನಗಳು:ಇದರ ಹತೋಟಿಗೆ ಗದ್ದೆಯ ಬದುಗಳಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕ ಗೊಬ್ಬರವನ್ನು ಕೊಡಬೇಕು. ಕೀಟವಿರುವ ಸೂಚನೆಯನ್ನು ನೋಡಿಕೊಂಡು ಇಂಡಾಕ್ಸಿಕಾರ್ಬ್ 0.5 ಮಿ.ಲೀ. ಅಥವಾ ಫ್ಲೂಬೆಂಡಮೈಡ್ 0.4 ಮಿ.ಲಿ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಣೆ ಮಾಡುವಾಗ ಕೀಟನಾಶಕಕ್ಕೆ ಅಂಟು ದ್ರಾವಣವನ್ನು ಸೇರಿಸಿ ಸಿಂಪಡಿಸುವುದು ಉತ್ತಮ.

ಹೆಚ್ಚಿನ ಮಾಹಿತಿಗೆ ವೀರೇಂದ್ರ ಕುಮಾರ್ ಕೆ.ವಿ., ವಿಷಯ ತಜ್ಞರು (ಸಸ್ಯ ಸಂರಕ್ಷಣೆ) ಅಥವಾ ಡಾ.ಸಂಗಪ್ಪ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ, ಕೊಡಗು ಜಿಲ್ಲೆ ಇವರುಗಳನ್ನು ದೂ.ಸಂ. 08274-295274, 9741621493 ಗಳ ಮೂಲಕ ಹಾಗೂ ಹತ್ತಿರದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.