ಜನರಲ್ ತಿಮ್ಮಯ್ಯ ಪ್ರತಿಮೆಗೆ ಅಗೌರವ ;ಕಾನೂನು ಕ್ರಮಕ್ಕೆ ಮುತ್ತ್‌ನಾಡ್ ಕೊಡವ ಸಮಾಜ ಆಗ್ರಹ
admincoorgdaily

ಮಡಿಕೇರಿ: ನಗರದ ಟೋಲ್‌ಗೇಟ್‌ನ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ, ಕಾರ್ಯಕ್ರಮ ಸಂದರ್ಭ ಜನರಲ್ ಕೆ.ಎಸ್.ತಿಮ್ಮಯ್ಯ ಪ್ರತಿಮೆಯ ಕಟ್ಟೆಯೊಳಗೆ ಏರಿದರೆ ಜಿಲ್ಲಾಡಳಿ, ಪೊಲೀಸ್ ಇಲಾಖೆ, ನಗರಸಭೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುತ್ತ್‌ನಾಡ್ ಕೊಡವ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಪ್ರತಿಭಟನೆ ಸಂದರ್ಭ ಪಾದರಕ್ಷೆ ಧರಿಸಿ ಪ್ರತಿಮೆಯ ಕಟ್ಟೆಯೊಳಗೆ ಕಸ ಹಾಕುವುದು, ಗೋಡೆಗಳಿಗೆ ಬ್ಯಾನರ್, ಫ್ಲೆಕ್ಸ್ ಅಂಟಿಸಿ ಅನುಚಿತವಾಗಿ ವರ್ತಿಸುವುದು ನಡೆಯುತ್ತಿದೆ. ಇದು ದೇಶದ ಹೆಮ್ಮೆಯ ಸೇನಾನಿ, ಕೊಡಗಿನ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರಿಗೆ ಮಾಡುವ ಅವಮಾನವಾಗಿದೆ ಎಂದು ಸಮಾಜದ ಅಧ್ಯಕ್ಷ ಎ.ಮಿಟ್ಟು ಉತ್ತಪ್ಪ ಬೇಸರ ವ್ಯಕ್ತಪಡಿಸಿದರು.
ನಾವೆಲ್ಲರೂ ಗೌರವದಿಂದ ಕಾಣುವ ಕೊಡಗಿನ ವೀರ ಸೇನಾನಿ ಭಾರತೀಯ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ತಿಮ್ಮಯ್ಯ ಅವರ ಗೌರವಾರ್ಥ ಟೋಲ್‌ಗೇಟ್ ವೃತ್ತಕ್ಕೆ ಅವರ ಹೆಸರಿಟ್ಟು ಪುತ್ಥಳಿ ಸ್ಥಾಪಿಸಲಾಗಿದೆ. ಜನ್ಮದಿನ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಗುತ್ತಿದೆ. ಆದರೆ ಕೆಲವೊಂದು ಪ್ರತಿಭಟನೆ ಮತ್ತು ಕಾರ್ಯಕ್ರಮಗಳ ಸಂದರ್ಭದಲ್ಲಿ ಈ ರೀತಿ ಅಗೌರವ ತೋರಲಾಗುತ್ತಿದೆ.
ಮುಂದೆ ಯಾವುದೇ ಸಮಾರಂಭ, ಪ್ರತಿಭಟನೆ ನಡೆಯುವಾಗ ಇಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ನಗರಸಭೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕು. ಪುನರಾವರ್ತನೆಯಾದರೆ ಸಮಾಜದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಕೆ.ವಾಸು ಜೋಯಪ್ಪ, ಕಾರ್ಯದರ್ಶಿ ಎನ್.ಹರಿ ಚಂಗಪ್ಪ, ಸದಸ್ಯರಾದ ಸಿ.ದಿಶಾಂತ್, ಜೆ.ರವಿ ಇದ್ದರು.