ಸರ್ಕಾರಿ ಶಾಲೆಗಳಿಗೆ ಲ್ಯಾಪ್‌ಟಾಪ್, ಪ್ರೊಜೆಕ್ಟರ್ ವಿತರಣೆ
admincoorgdaily

ವಿರಾಜಪೇಟೆ:ಶಾಲಾ ಮಕ್ಕಳ ಉತ್ತಮ ಹಾಗೂ ಆಧುನಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ಅರಣ್ಯ ಇಲಾಖೆ ಮೂಲಕ ಆಯ್ದ ಶಾಲೆಗಳಿಗೆ ನೀಡುವ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್ ವ್ಯವಸ್ಥೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ಹಸ್ತಾಂತರಿಸಿದರು.
ಪೊನ್ನಂಪೇಟೆ ತಾಲ್ಲೂಕಿನ ಬೇಗೂರು, ಹುದಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನ ದೇವಣಗೇರಿ, ಕುಂಜಿಲಗೇರಿ ಶಾಲೆಗಳಿಗೆ ಶಾಸಕರ ಗೃಹ ಕಚೇರಿಯಲ್ಲಿ ಉಪಕರಣಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ಮಕ್ಕಳು ಆಧುನಿಕ ವಿದ್ಯಾಭ್ಯಾಸ ಮತ್ತು ತಂತ್ರಜ್ಞಾನಕ್ಕೆ ಹೊಂದಿಕೊಂಡು ಭವಿಷ್ಯದ ಪ್ರಜೆಗಳಾಗಿ ರೂಪುಗೊಳ್ಳಲು ಅನುಕೂಲವಾಗಲಿ ಎಂದು ಸರ್ಕಾರ ಈ ಕೊಡುಗೆ ನೀಡುತ್ತಿದೆ. ಶಿಕ್ಷಕರು ಇದರ ಸದುಪಯೋಗವನ್ನು ಮಕ್ಕಳಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರಮುಖರಾದ ಅಜ್ಜಿಕುಟ್ಟಿರ ಪೊನ್ನಪ್ಪ, ಆದಿತ್ಯ ಪೆಮ್ಮಯ್ಯ, ಮಚ್ಚಾರಂಡ ಕಿರಣ್, ಮಹಾದೇವ ಮತ್ತಿತರರು ಉಪಸ್ಥಿತರಿದ್ದರು.