Kodagu

ಪೊನ್ನಂಪೇಟೆಯಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ: ಶಾಸಕ ಎ.ಎಸ್. ಪೊನ್ನಣ್ಣ ಭಾಗಿ

admincoorgdaily

ಪೊನ್ನಂಪೇಟೆಯಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ: ಶಾಸಕ ಎ.ಎಸ್. ಪೊನ್ನಣ್ಣ ಭಾಗಿ
ಪೊನ್ನಂಪೇಟೆ: ಪೊನ್ನಂಪೇಟೆ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್. ಪೊನ್ನಣ್ಣ ಭಾಗವಹಿಸಿದರು.

ಪೊನ್ನಂಪೇಟೆ ತಾಲೂಕಿನ ಭಗವತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ವಲಯ ಅಧ್ಯಕ್ಷರುಗಳಿಗೆ ಹಾಗೂ ವಿವಿಧ ಹುದ್ದೆಗಳಿಗೆ ನೇಮಕವಾಗಿರುವ ಪ್ರಮುಖರಿಗೆ ಆದೇಶ ಪತ್ರ ವಿತರಿಸಲಾಯಿತು.

ಆದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳಲ್ಲಿ ಪ್ರಮುಖವಾದ ಮಹಿಳಾ ಕಾಂಗ್ರೆಸ್ ಸಂಘಟನೆ ಮತ್ತು ಬಲವರ್ಧನೆ ತುಂಬಾ ಮುಖ್ಯ. ಭಾರತದ ಮಣ್ಣಿನಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಅನೇಕ ವೀರನಾರಿಯರು ಬಂದು ಪಕ್ಷವನ್ನು ಕಟ್ಟಿರುವುದು ಸದಾ ನೆನಪುಳಿಯುವ ಇತಿಹಾಸ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರಂತಹ ಮಹಾನ್ ಮಹಿಳೆಯರು ಈ ಪಕ್ಷವನ್ನು ಮುನ್ನಡೆಸಿದ್ದಾರೆ. ಇಂತಹವರಿಂದ ಸ್ಫೂರ್ತಿ ಪಡೆದು ಪಕ್ಷ ಸಂಘಟಿಸಿ ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಮಹಿಳಾ ಕಾಂಗ್ರೆಸ್ ಸಂಘಟಿತವಾದಲ್ಲಿ ಪಕ್ಷದ ಬಹುತೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಹಕಾರಿಯಾಗುತ್ತದೆ. ಮಹಿಳಾ ಸಂಘಟನೆಗೆ ಬೇಕಾದ ಎಲ್ಲ ಸಹಕಾರವನ್ನು ಜಿಲ್ಲಾ ಕಾಂಗ್ರೆಸ್ ನೀಡಲಿದ್ದು, ನೂತನ ಪದಾಧಿಕಾರಿಗಳು ಅಧ್ಯಕ್ಷರೊಂದಿಗೆ ಸೇರಿಕೊಂಡು ಪಕ್ಷ ಸಂಘಟನೆಯತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹಿರಿಯರಾದ ಮುಕಳೇರ ಕುಶಾಲಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೂಪಾ ಭೀಮಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷೆ ಪದವಿ ಧನ್ಯ, ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾ ಪೂಣಚ್ಚ, ನಿಕಟಪೂರ್ವ ಅಧ್ಯಕ್ಷೆ ಭಾರತೀ ಸೇರಿದಂತೆ ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.