ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ; ನ.20ಕ್ಕೆ ಪ್ರಕಟವಾಗಲಿದೆ ಅಂತಿಮ ಮೀಸಲು ಪಟ್ಟಿ ಪ್ರಕಟ?
K.M ISMAIL KANDAKKARE

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಬೆಂಗಳೂರು:ರಾಜ್ಯದಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದೆ. ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ನವೆಂಬರ್ 20ರ ಶುಕ್ರವಾರ ಪ್ರಕಟವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ರಾಜ್ಯದ 30 ಜಿಲ್ಲೆಗಳ 1101 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಹಾಗೂ 234 ತಾಲೂಕು ಪಂಚಾಯತಿಗಳ 3580 ಸದಸ್ಯ ಸ್ಥಾನಗಳಿಗೆ ಸಂಬಂಧಿಸಿದಂತೆ ಮೀಸಲು ನಿಗದಿ ಮಾಡಿ ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು.
ಇದಾದ ನಂತರ ಅ.19ರವರೆಗೆ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಒಟ್ಟು 2900ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಗ್ರಾಮ ಪಂಚಾಯತಿ ಇಲಾಖೆಯ ಅಧಿಕಾರಿಗಳು ನಿಯಮಾನುಸಾರ ಈ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ಷೇತ್ರಗಳ ಅಂತಿಮ ಅಧಿಸೂಚನೆ ಸಿದ್ಧಪಡಿಸಿದ್ದು, ನ.20ರಂದು ಅಧಿಸೂಚನೆ ಪ್ರಕಟಿಸಲಾಗುವುದು ಎಂದರು.
ಅಂತಿಮ ಮೀಸಲು ಪಟ್ಟಿ ಪ್ರಕಟವಾದ ಕೂಡಲೇ ಯಾವ ಕ್ಷೇತ್ರ ಯಾವ ವರ್ಗಕ್ಕೆ ಮೀಸಲು ಎಂಬುದು ಸ್ಪಷ್ಟವಾಗಲಿದೆ. ಇದರಿಂದ ಆಕಾಂಕ್ಷಿಗಳಿಗೆ ತಮ್ಮ ಕ್ಷೇತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಚುನಾವಣಾ ಕಣ ಇನ್ನಷ್ಟು ರಂಗೇರಲಿದೆ.