ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
admincoorgdaily

ಮಡಿಕೇರಿ:-ಕುಶಾಲನಗರ ತಾಲ್ಲೂಕಿನ ಹಾರಂಗಿ ಹಿನ್ನೀರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.
ಹಾರಂಗಿ ಹಿನ್ನೀರು ಪ್ರದೇಶದ ಜಲಸಹಾಸ ಕ್ರೀಡೆ ಸಂದರ್ಭದಲ್ಲಿ ಬೋಟ್ ಮುಳುಗಿ ದಂಪತಿಗಳು ಮೃತಪಟ್ಟ ಹಿನ್ನೆಲೆ ಆ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಜಲಸಾಹಸ ಕ್ರೀಡೆ ಸಂದರ್ಭದಲ್ಲಿ ದುರ್ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಿತ್ತು. ಸದ್ಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಜಲಸಹಾಸ ಕ್ರೀಡೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ 2023 ರಿಂದ ಖಾಸಗಿ ಕಂಪೆನಿಯು ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಜಲಸಹಾಸ ಕ್ರೀಡೆ ನಡೆಸುತ್ತಿದ್ದು, ಮೃತಪಟ್ಟ ದಂಪತಿ ಸ್ಪೀಡ್ ಬೋಟ್ನಲ್ಲಿ ತೆರಳುತ್ತಿದ್ದರು. ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಅಷ್ಟರಲ್ಲಿ ಬೋಟ್ನಡಿ ಇಬ್ಬರು ಸಿಲುಕಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದುಬಾರೆ ರಿವರ್ ರ್ಯಾಫ್ಟಿಂಗ್ ಬಳಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಲಯ ಮಾಹಿತಿ ಪಡೆದರು.
ನಂತರ ಬಸವನಹಳ್ಳಿ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಎಸ್ಇ ಸತೀಶ್, ಎಇಇ ಪುಟ್ಟಸ್ವಾಮಿ, ತಹಶೀಲ್ದಾರ್ ರಮೇಶ್, ಲೋಕೋಪಯೋಗಿಯ ಕಾರ್ಯಪಾಲಕ ಎಂಜಿನಿಯರ್ ಪ್ರಭು ಇತರರು ಇದ್ದರು.