Kodagu

ಮಡಿಕೇರಿಯಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆ

admincoorgdaily

ಮಡಿಕೇರಿಯಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ  ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆ
ಮಡಿಕೇರಿ;
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಮಡಿಕೇರಿಯ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಗುರುವಾರ (ಅ.1 ರಂದು) ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆಯನ್ನು (ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ) ಹಮ್ಮಿಕೊಳ್ಳಲಾಗಿತ್ತು.
 ಸ್ಪರ್ಧೆಯಲ್ಲಿ ತಾಲ್ಲೂಕುಮಟ್ಟದ ಸ್ಪರ್ಧೆಯಿಂದ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದ ಬುಲ್ಸ್ ಬುಲ್ಸ್, ಕಬ್ಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೇಂಜರ್ಸ್ ಮತ್ತು ರೋವರ್ಸ್ ನ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ದೇಶಭಕ್ತಿ ಹಾಡಿ ಪ್ರೇಕ್ಷಕರ ಗಮನ ಸೆಳೆದರು.

    ಗೀತಾ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜಿನ ತುರ್ತು ಸೇವಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರೂ ಆದ ಕೊಲ್ಯಯಂಡ ಡಾ ಮೋಹನ್ ಅಪ್ಪಾಜಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತು ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸಲು ಏರ್ಪಡಿಸಿರುವ ಈ ಸ್ಪರ್ಧೆಯ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳು ಉತ್ತಮ ತರಬೇತಿ  ಪಡೆದು ತಮ್ಮಲ್ಲಿ  ಶಿಸ್ತು, ಸಂಯಮ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದು ಡಾ ಮೋಹನ್ ಅಪ್ಪಾಜಿ ಹೇಳಿದರು.
 ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, 216 ದೇಶದಲ್ಲಿರುವ  ಈ ಸಂಘಟನೆಯು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗದಲ್ಲಿ ಉತ್ತಮ ತರಬೇತಿ, ಶಿಸ್ತು, ಸಂಯಮ, ಅಭಿನಯ ಮತ್ತು ಚಿಂತನೆ ಪರೋಪಕಾರ ಸಮಾಜಮುಖಿ ಕಾರ್ಯ, ಪರಿಸರ ರಕ್ಷಣೆ, ದಿನಕ್ಕೊಂದು ಒಳ್ಳೆಯ ಕೆಲಸ ಮಾಡುವುದು ಸೇರಿದಂತೆ ಒಟ್ಟಾರೆ  ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಸ್ವಯಂ ಸೇವಾಸಂಸ್ಥೆಯಾಗಿ ರೂಪುಗೊಂಡಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ  ನಿಯಮಿತವಾಗಿ ಆಯೋಜಿಸುತ್ತಾ ಬಂದಿರುವ
ದೇಶಭಕ್ತಿ ಹಾಗೂ ಗೀತಾ ಗಾಯನ ಸ್ಪರ್ಧೆಗಳು
ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸೌಹಾರ್ದತೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದರೊಂದಿಗೆ ಸ್ಪರ್ಧಾ ಮನೋಭಾವ ಬೆಳೆಸಲು
ಸಹಕಾರಿಯಾಗಿವೆ ಎಂದು ಬೇಬಿಮಾಥ್ಯೂ ಹೇಳಿದರು.

      ಜಿಲ್ಲಾ ಗೈಡ್ಸ್ ಸಂಸ್ಥೆಯ  ಆಯುಕ್ತರೂ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಐಮುಡಿಯಂಡ
ರಾಣಿ ಮಾಚಯ್ಯ, ಸಂಸ್ಥೆಯ  ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್,  ಕಾರ್ಯದರ್ಶಿ ಎಂ.ಎಂ.ವಸಂತಿ,
ಸಹ ಕಾರ್ಯದರ್ಶಿ ಬೊಳ್ಳಜೀರ ಬಿ.ಅಯ್ಯಪ್ಪ, ಜಿಲ್ಲಾ ಸಂಸ್ಥೆಯ ಸ್ಥಾನೀಕ ಆಯುಕ್ತ ಎಚ್.ಆರ್.
ಮುತ್ತಪ್ಪ, ಜಿಲ್ಲಾ ಗೈಡ್ಸ್ ವಿಭಾಗದ ತರಬೇತಿ ಆಯುಕ್ತೆ ಮೈಥಿಲಿರಾವ್, ಜಿಲ್ಲಾ  ಗೈಡ್ಸ್ ವಿಭಾಗದ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ಸಂಸ್ಥೆಯ ಜಿಲ್ಲಾ ಸಂಘಟಕಿ
ಯು.ಸಿ.ದಮಯಂತಿ, ಸ್ಕೌಟ್ಸ್ 
ವಿಭಾಗದ ಸಹಾಯಕ ಆಯುಕ್ತ ಕೆ.ಬಿ.ಗಣೇಶ್, ಸಂಸ್ಥೆಯ ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಉಷಾರಾಣಿ, ಸಂಸ್ಥೆಯ ದಳ ನಾಯಕರು/ ದಳ ನಾಯಕಿಯರು, ವಿದ್ಯಾರ್ಥಿಗಳು ಇದ್ದರು.

    ವಿದ್ಯಾರ್ಥಿಗಳು ವಿವಿಧ
ವೇಷಭೂಷಣಗಳೊಂದಿಗೆ ಸಾಂಪ್ರದಾಯಿಕ  ದೇಶಭಕ್ತಿ ಗೀತೆಗಳ ಗಾಯನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.