ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಆಟದ ಮೈದಾನದಲ್ಲಿ ಯಶಸ್ವಿಯಾಗಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆಯಿತು.
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ ಎಸ್ ತಿಮ್ಮಯ್ಯ ಆಟದ ಮೈದಾನದಲ್ಲಿ ಆಯೋಜಿಸಲಾದ ಕ್ರೀಡಾ ಕೂಟವನ್ನು ಗಣ್ಯರು ಹ್ಯಾಂಡ್ ಬಾಲ್ ಎಸೆಯುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ ಪ್ರಭಾರ ಉಪನಿರ್ದೇಶಕರಾದ ಆರ್. ಪಿ.ಮಹೇಶ್ ಅವರು ಮಾತನಾಡಿ "ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಕ್ರೀಡೆಗಳು ಅನಿವಾರ್ಯ. ಕ್ರೀಡೆ ಒಂದು ಉತ್ತಮ ವ್ಯಾಯಾಮ ಕ್ರೀಡೆಯು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ.ಹ್ಯಾಂಡ್‌ಬಾಲ್‌ನಂತಹ ವೇಗದ ಆಟಗಳು ದೈಹಿಕ ಸಾಮರ್ಥ್ಯದ ಜೊತೆಗೆ ತಕ್ಷಣದ ನಿರ್ಧಾರ ತೆಗೆದುಕೊಳ್ಳುವ ಕೌಶಲವನ್ನು ಹೆಚ್ಚಿಸುತ್ತವೆ. ಸೋಲು-ಗೆಲುವಿಗಿಂತ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ," , ಕ್ರೀಡಾಕೂಟ ಯಶಸ್ವಿಯಾಗಾಲಿ ಎಂದು ಶುಭ ಕೋರಿದರು,
ಕರ್ನಾಟಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಎನ್.ಎಸ್.ಉದಯಶಂಕರ್ ಅವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಮುಖ್ಯವಾಗಿ ಸೋಲಿನಿಂದ ಎಲ್ಲಿ ಎಡವಿದ್ದೇವೆ ಯಾವ ರೀತಿ ಸುಧಾರಿಸಿಕೊಳ್ಳಬೇಕು ಎಂಬ ಒಂದು ಪಾಠವನ್ನು ಕೂಡ ಕಲಿಸುತ್ತದೆ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಸಿವಿಲ್ ಕಾಮಗಾರಿ ಉಪಸಮಿತಿ ಅಧ್ಯಕ್ಷರಾದ ಕೆ. ಎ.ಹಾರಿಸ್ ಮಾತನಾಡಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ವಲಯ ಮತ್ತು ತಾಲೂಕು ಮಟ್ಟದಲ್ಲಿ ಗೆದ್ದು ಇಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟಕ್ಕೆ ಅವಕಾಶವನ್ನು ಪಡೆದುಕೊಂಡಿರುತ್ತೀರಿ, ಕ್ರೀಡೆಯು ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಮತ್ತು ಶಾರೀರಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ, ಕ್ರೀಡಾಪಟುಗಳು ಶಿಸ್ತಿನಿಂದ ಒಳ್ಳೆಯ ರೀತಿಯಲ್ಲಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಹಕರಿಸಿ, ವಿಜಯಶಾಲಿಗಳು ರಾಜ್ಯಮಟ್ಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿಯನ್ನು ತರುವಂತಾಗಲಿ ಎಂದು ಆಶಿಸಿದರು.
ದಾನಿಗಳಾದ ಬಿ. ಎಂ.ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಟ್ರೋಫಿ ದಾನಿಗಳಾದ ಬಿ. ಎಂ.ಪ್ರದೀಪ್ ಮತ್ತು ಎನ್. ಎಸ್.ಉದಯ ಶಂಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಂದ್ಯದಲ್ಲಿ ಕ್ರೀಡಾಪಟುಗಳು ಅತ್ಯುತ್ತಮ ರಕ್ಷಣಾ ತಂತ್ರ ಹಾಗೂ ಆಕರ್ಷಕ ಗೋಲುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಪಂದ್ಯಾವಳಿಯ ತೀರ್ಪುಗಾರರಾಗಿ ನುರಿತ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯನಿರ್ವಹಿಸಿದರು.
17 ವರ್ಷದ ವಯೋಮಾನದೊಳಗಿನ ಬಾಲಕರ ವಿಭಾಗದಲ್ಲಿ ಫಾತಿಮಾ ಕಾನ್ವೆಂಟ್ ಕುಶಾಲನಗರ ಪ್ರಥಮ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ ದ್ವಿತೀಯ,
:ಬಾಲಕಿಯರ ವಿಭಾಗದಲ್ಲಿ ಸೆಂಟ್ ಆನ್ಸ್ ವಿರಾಜಪೇಟೆ ಪ್ರಥಮ,ಎಬಿವಿಆರ್ ಎಸ್ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ ದ್ವಿತೀಯ ಸ್ಥಾನ ಪಡೆದರು.
:14 ವರ್ಷದ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ ಪ್ರಥಮ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ ದ್ವಿತೀಯ
:ಬಾಲಕಿಯರ ವಿಭಾಗದಲ್ಲಿ
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ ಪ್ರಥಮ,
ಲಯನ್ಸ್ ಗೋಣಿಕೊಪ್ಪ, ದ್ವಿತೀಯ ಸ್ಥಾನ ಪಡೆದು ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಪಡೆದುಕೊಂಡು
ಸೆ.12 ರಂದು ಮಂಡ್ಯದಲ್ಲಿ ನಡೆಯುವ
ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ ತಂಡಗಳು ಮುಂಬರುವ ರಾಜ್ಯ ಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟಕ್ಕೆ ಜಿಲ್ಲೆಯನ್ನು ಪ್ರತಿನಿಧಿಸಲು ಅರ್ಹತೆ ಪಡೆದರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅತಿಥಿಗಳು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ವಿತರಿಸಿದರು.
ಈ ಸಂದರ್ಭ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ರೇವಣ್ಣ, ತಾಲೂಕು ದೈಹಿಕ ಪರಿವೀಕ್ಷರಾದ ಬಾಲಚಂದ್ರ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಶಿವಣ್ಣ ಎನ್ ಎಸ್, ಹಾಗೂ ಕೊಡಗು ಜಿಲ್ಲೆಯ ವಿವಿಧ ತಾಲೂಕಿನಿಂದ 24 ಜನ ನಿರ್ಣಾಯಕರು ಹಾಗೂ ಪ್ರಾಥಮಿಕ ವಿಭಾಗದಿಂದ ಆರು ತಂಡಗಳು, ಪ್ರೌಢಶಾಲೆಯಿಂದ,ಆರು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿ ಕ್ರೀಡಾ ಅಭಿಮಾನಿಗಳು ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.