ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಕನಕ ಭವನ ನಿರ್ಮಾಣ : ಶಾಸಕ ಡಾ.ಮಂತರ್ ಗೌಡ ಭರವಸೆ
admincoorgdaily

ಕುಶಾಲನಗರ : ತಾಲ್ಲೂಕು ಕೇಂದ್ರ ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಕನಕ ಭವನ ನಿರ್ಮಾಣ ಮಾಡಲು ಅಗತ್ಯ ಅನುದಾನ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಸೋಮವಾರಪೇಟೆ ಪಟ್ಟಣ ಪಂಚಾಯಿತಿ,ಕುಶಾಲನಗರ ಪುರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ
ಶುಕ್ರವಾರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಶ್ರೀ ಕನ್ನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕ ಭವನ ನಿರ್ಮಾಣಕ್ಕೆ ಅಗತ್ಯ ಜಾಗದ ಗುರುತಿಸಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ ಶಾಸಕರು, ಕನಕ ಭವನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಅದೇ ರೀತಿ ಕಲಾಭವನದ ಉಳಿದ ಕಾಮಗಾರಿಗಾಗಿ ರೂ.1.40 ಕೋಟಿ ಬಿಡುಗಡೆಯಾಗಿದ್ದು, ಸಂಪೂರ್ಣ ಕಾಮಗಾರಿ ಮುಗಿಸಿ ಸುಸಜ್ಜಿತವಾದ ಕಲಾಭವನವಾಗಿ ರೂಪಿಸಲಾಗುತ್ತದೆ ಎಂದರು.
ನಾಡಿನ ಮಹಾನ್ ಸಂತ ಕನಕದಾಸರು,ಕುಲ ಕುಲವೆಂದು ಹೊಡೆದಾಡದಿರಿ ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೌಢ್ಯಗಳನ್ನ ಕಳೆಯಲು ಶ್ರಮಿಸಿದರು.
ಪ್ರತಿಯೊಬ್ಬರೂ ಕನಕದಾಸರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಾತಿ, ಮತದ ಬೇಧ ಬಾವ ತೊರೆದು ಆರೋಗ್ಯಕರ ಜೀವನ ನಡೆಸಬೇಕು ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕನಕದಾಸ ಜಯಂತಿಯು ಸಂತ ಹಾಗೂ ಮಹಾಕವಿಯಾದ ಕನಕದಾಸರ ಜನ್ಮ ದಿನವಾಗಿದೆ. ಕನಕದಾಸರು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದರು. ತಮ್ಮ ಕೀರ್ತನೆ, ಸಂಗೀತಗಳ ಮೂಲಕ ಮನೆಮಾತಾಗಿದ್ದಾರೆ.
ಕನಕದಾಸರು ಸಾಮಾಜಿಕ ಪರಿವರ್ತನೆ ತಮ್ಮ ಕೀರ್ತನೆಗಳ ಮೂಲಕ ಶ್ರಮಿಸಿದರು.ಅವರ ಆದರ್ಶಗಳು ಎಲ್ಲರಿಗೂಅನ್ವಯಿಸುತ್ತದೆ. ಜಾತಿ,ಮತ,ಪಥ,ಧರ್ಮ ತೊರೆದು ಪ್ರತಿಯೊಬ್ಬರೂ ಮಾನವ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜಿಲ್ಲಾ ಲೇಖಕರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,
ಕನಕದಾಸರು ತಮ್ಮ ಬಾಲ್ಯದಿಂದಲೇ ಅನಿಷ್ಟ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಠೋರ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಅವರು ತಮ್ಮ ಕವಿತೆಗಳ ಮೂಲಕ ಈ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದರು. ತಮ್ಮ ಕೃತಿಗಳಲ್ಲಿ ಬಾಹ್ಯ ಆಚರಣೆಗಳ ನಿರರ್ಥಕತೆಯನ್ನು ಎತ್ತಿ ತೋರಿಸಿದ ಅವರು, ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯತೆಗಳಿಗೆ ವಿಶೇಷ ಮಹತ್ವವನ್ನು ನೀಡಿದರು.
ಕನಕಗುರು ಪೀಠದ ಧರ್ಮದರ್ಶಿ ಎಂ.ನಂಜುಂಡಸ್ವಾಮಿ,ಕನಕದಾಸರ ದಾಸ ಸಾಹಿತ್ಯದ ಮಹತ್ವ ಹಾಗೂ ಕೀರ್ತನೆಗಳ ಕುರಿತು ಮಾತನಾಡಿದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಸಮಾನತೆ ಹಾಗೂ ತಾರತಮ್ಯಗಳನ್ನು ತಿದ್ದಲು ಪ್ರಯತ್ನಿಸಿದರು ಎಂದರು.
ಸಂಗೊಳ್ಳಿರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ಎಲ್ಲರೂ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದರು.
ಈ ಸಂದರ್ಭ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆದಂ. ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ವಕೀಲ ಹೆಚ್.ಕೆ.ನಾಗೇಶ್, ಸದಸ್ಯ ವಕೀಲ ಜೆಯೇಂದ್ರ
ತಹಶೀಲ್ದಾರ್ ರಮೇಶ್ಬಾಬು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಸೋಮವಾರಪೇಟೆ ಪುರಸಭೆ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್,ಹಿಂದುಳಿದ ವರ್ಗ ಇಲಾಖೆ ಅಧಿಕಾರಿ ಎಚ್.ಎ.ಮೋಹನ್ಕುಮಾರ್,
ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಕೆ.ಬಿ.ರಾಜು, ದಲಿತ ಮುಖಂಡ ನಿರ್ವಾಣಪ್ಪ,ಮುಖಂಡರಾದ ಸಂಗಮೇಶ್ ,ದಾಮೋದರ್ ಇತರರು ಪಾಲ್ಗೊಂಡಿದ್ದರು.
ನಿತ್ಯ ಸ್ವಾಗತಿಸಿದರು.ಆನಂದ ವಂದಿಸಿದರು.
ಮೌನಶ್ರೀ,ನಿತ್ಯಶ್ರೀ ಪ್ರಾರ್ಥಿಸಿದರು.ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಿಸಿಎಂ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರ ಕಲಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.