Kodagu

ನವೆಂಬರ್ 28 ಮತ್ತು 29 ರಂದು ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ

admincoorgdaily

ನವೆಂಬರ್ 28 ಮತ್ತು 29 ರಂದು ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ
ವಿರಾಜಪೇಟೆ:
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ಇವರ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ನವೆಂಬರ್ ತಿಂಗಳ 28 ಮತ್ತು 29ರಂದು ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಕುರಿತು ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಡೇನಿಯಲ್ ಸಾಲ್ಡಾನಾ ಅವರು ನವೆಂಬರ್ 28, 29ರಂದು ಶನಿವಾರ ಹಾಗೂ ಭಾನುವಾರದಂದು ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

 ದಶಕಗಳಿಂದ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘವು ಸಮಾಜ ಸೇವೆಯಲ್ಲಿ ತೊಡಗಿದ್ದು ಕ್ರೀಡಾಕೂಟವನ್ನು ಆಯೋಜಿಸುವುದರ ಮೂಲಕ ಮಹತ್ತರ ಹೆಜ್ಜೆಯನ್ನು ಇಡುತಿದೆ. ಈ ಬಾರಿಯೂ ಸಹ ಸರ್ವ ಸಮಾಜ ಬಾಂಧವರಿಗೂ ಮುಕ್ತವಾಗಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಆಗಮಿಸಬೇಕು. ಎಲ್ಲಾ ಸಮಾಜ ಬಾಂಧವರು ಜನಾಂಗದವರು ಪಂದ್ಯಾಟದಲ್ಲಿ ಭಾಗವಹಿಸಬಹುದು. 

ಕಳೆದ ಬಾರಿ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಿ ಜರುಗಿದ್ದು ಈ ಪಂದ್ಯಾಟವನ್ನು ಸಹ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು. ಕೊಡಗು ಜಿಲ್ಲೆಯ ಒಟ್ಟು 20 ತಂಡಗಳಿಗೆ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು ವಿಜೇತರಾಗಿ ಪ್ರಥಮ ಸ್ಥಾನವನ್ನು ಪಡೆದ ತಂಡಕ್ಕೆ ರೂ 31,000 ಹಾಗೂ ಟ್ರೋಫಿ, ದ್ವಿತೀಯ ಸ್ಥಾನವನ್ನು ಪಡೆದ ತಂಡಕ್ಕೆ ರೂ 21,000 ಹಾಗೂ ಟ್ರೋಫಿ ಮಾತ್ರವಲ್ಲದೆ ವೈಯುಕ್ತಿಕ ವಿಭಾಗದಲ್ಲಿಯೂ ಬಹುಮಾನಗಳನ್ನು ನೀಡಲಾಗುವುದು. 

ಪ್ರವೇಶ ಶುಲ್ಕವು ರೂ 2,000 ವನ್ನು ನಿಗದಿಪಡಿಸಲಾಗಿದೆ ಎಂದರು. ಸಂಘದ ಕ್ರೀಡಾ ಕಾರ್ಯದರ್ಶಿ ಬಿಲ್ಟನ್ ವಾಸ್ ಮಾತನಾಡಿ ಒಟ್ಟು 20 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಅತಿಥಿ ಆಟಗಾರರಿಗೆ ಆಡಲು ಅವಕಾಶವಿಲ್ಲ. ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದೆ. ನಾಕೌಟ್ ಪಂದ್ಯಗಳು ನಡೆಯಲಿವೆ ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ನೆಲ್ಸನ್ ಈ. ಪಿ ಅವರು ಮಾತನಾಡಿ  ವಾಲಿಬಾಲ್ ಪಂದ್ಯಾಟವು ಕೇವಲ ಆಟವಲ್ಲ. ಬದಲಾಗಿ ಯುವಶಕ್ತಿಯನ್ನು ಒಂದೆಡೆಯಲ್ಲಿ ಸೇರಿಸುತ್ತದೆ.  ಏಕತೆ, ಆರೋಗ್ಯ ಉತ್ತಮ ಸ್ನೇಹಕ್ಕಾಗಿ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಅಂತೆಯೇ ಈಗ ಆಯೋಜಿಸಿರುವ ಕ್ರೀಡಾಕೂಟಕ್ಕೆ ಸರ್ವರೂ ಸಹಕರಿಸಬೇಕೆಂದು ಹೇಳಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮ್ಯಾಥ್ಯೂ ಮಾತನಾಡಿ ನಮ್ಮ ಸಂಘದ ವತಿಯಿಂದ ಈ ಬಾರಿ ವಾಲಿಬಾಲ್ ಪಂದ್ಯಾಟವನ್ನು ಗ್ರಾಮೀಣ ಯುವಕರಿಗೆ ಉತ್ತೇಜನವನ್ನು ನೀಡಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ. ಇದಕ್ಕಾಗಿ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ. ಎಲ್ಲ ಜನಾಂಗದವರಿಗೂ ಸಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದ್ದು ಇತರರಿಗೂ ಉತ್ತೇಜನವನ್ನು ನೀಡಬೇಕು ಎಂದರು. 

ಸಂಘದ ಉಪಾಧ್ಯಕ್ಷರಾದ ರಿಯೋನ್ ಲೋಬೋ ಮಾತನಾಡಿ 20 ವರ್ಷಗಳ ಹಿಂದೆ ನಿಂತಂತಹ ವಾಲಿಬಾಲ್ ಪಂದ್ಯಾಟವನ್ನು ಈ ಬಾರಿ ಆಯೋಜಿಸುತ್ತಿದ್ದು ಮಹತ್ವಪೂರ್ಣ ವಿಷಯವಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆಯಿರಿ ಎಂದು ಹೇಳಿದರು. ತಂಡಗಳ ನೋಂದಾವಣೆ ಮಾಡಲು 22/ 11/ 2026 ಕಡೆಯ ದಿನಾಂಕವಾಗಿದ್ದು ನೋಂದಾವಣೆಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದರು. 
9880237021, 9480605238, 7975318071.