ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ: ನಾಪೋಕ್ಲು ಕೆಪಿಎಸ್ ಶಾಲೆವಿದ್ಯಾರ್ಥಿಗಳ ತಂಡ ರಾಜ್ಯಮಟ್ಟಕ್ಕೆ ಆಯ್ಕೆ
admincoorgdaily


ನಾಪೋಕ್ಲು: ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಡಿಕೇರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಹೆಚ್ಐವಿ ಏಡ್ಸ್ ಅರಿವಿನ ಮಾಸಾಚರಣೆ 20 26 ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೊಕ್ಕು ವಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಾಪೋಕ್ಲು ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಾದ ಫಾತಿಮತುಲ್ ಬಿ.ಜೆ. ಅಫ್ರಿನಾ ಮತ್ತು ಸಿ.ಎಚ್. ಸಿಯಾನ ತಂಡ 37 ಅಂಕ ಗಳಿಸಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದರು. ವಿಜೇತ ತಂಡಕ್ಕೆ ರೂಪಾಯಿ 6,000 ನಗದು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಗಳಿಸಿತು.ಶಾಲೆಯ ವಿದ್ಯಾರ್ಥಿಗಳಾದ ಎನ್.ಸಿ ಕಾವೇರಪ್ಪ ಹಾಗೂ ರಿಷಿತ್ ಕೆ .ಎಸ್ ತಂಡ 27 ಅಂಕಗಳಿಸಿ ದ್ವಿತೀಯ ಬಹುಮಾನ 5000 ರೂ ಹಾಗೂ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು. ತೃತೀಯ ಸ್ಥಾನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಳಿಸಿದರು.26 ಅಂಕಗಳಿಸಿದ ಸಿಂಚನ ಪಿ ಎಸ್ ಮತ್ತು ಪ್ರಾರ್ಥನಾ ಪೊನ್ನಮ್ಮ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 12 ತಂಡಗಳು ಪಾಲ್ಗೊಂಡಿದ್ದವು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಸನತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವ ಜನರಲ್ಲಿ ಹೆಚ್ಐವಿ ಏಡ್ಸ್ ಕುರಿತಾದ ಅರಿವನ್ನು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆಯನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ. ಯುವ ಆರೋಗ್ಯವಂತ ಯುವ ಸಮುದಾಯದಿಂದ ಸುಭದ್ರ ದೇಶ ನಿರ್ಮಾಣ ಸಾಧ್ಯ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನಿತಾ ಮುತ್ತಣ್ಣ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಪಿಓ ಮಲ್ಲೇಶ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಅಶ್ವಿತಾ,ಯಮುನಾ, ಅರುಣ್ ಕುಮಾರ್, ಸಂಯೋಜಕ ಟೈನಿ ಪಾಲ್ಗೊಂಡಿದ್ದರು. ರಸಪ್ರಶ್ನೆ ಸ್ಪರ್ಧೆಯನ್ನು ಸಿ.ಎಸ್. ಸುರೇಶ್ ನಡೆಸಿಕೊಟ್ಟರು.
ವರದಿ :ಝಕರಿಯ ನಾಪೋಕ್ಲು