ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ನ.9ರಂದು ದೀಪಾವಳಿ ದೀಪೋತ್ಸವ
admincoorgdaily

ಮಡಿಕೇರಿ ನ.5 : ನಗರದ ಕರ್ಣಂಗೇರಿ ಕ್ಷೇತ್ರದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ನ.9ರಂದು ಅಮಾವಾಸ್ಯೆಯ ಪ್ರಯುಕ್ತ ದೀಪಾವಳಿ ದೀಪೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಗೋವಿಂದ ಸ್ವಾಮಿ ಅವರು ದೀಪೋತ್ಸವದ ಅಂಗವಾಗಿ ಅಂದು ರಾತ್ರಿ 7 ಗಂಟೆಗೆ ಕಳಸ ಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನದಾನ ಹಾಗೂ ಪ್ರಸಾದ ವಿನಿಯೋಗ, ರಾತ್ರಿ 9 ಗಂಟೆಗೆ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ರಾತ್ರಿ 9.30ಕ್ಕೆ ದೀಪೋತ್ಸವ ಪ್ರಾರಂಭವಾಗಲಿದ್ದು, ನಂತರ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
ಭಕ್ತಾದಿಗಳು ಗ್ರಹದೋಷ ಹಾಗೂ ಸಂಕಷ್ಟಗಳ ಪರಿಹಾರಕ್ಕಾಗಿ ದೇವಸ್ಥಾನದ ಆವರಣದಲ್ಲಿ 108 ಎಳ್ಳು ಬತ್ತಿಗಳನ್ನು ಬೆಳಗಿಸುವ ಮೂಲಕ ದೀಪಾರಾಧನೆ ಸಲ್ಲಿಸಬಹುದಾಗಿದೆ.
ದೀಪೋತ್ಸವದ ದಿನದಂದು ನೈವೇದ್ಯ ಪ್ರಸಾದ, ಅನ್ನದಾನ, ದೇವಸ್ಥಾನದ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರಕ್ಕೆ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ದೇವಾಲಯದ ಆಡಳಿತ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.
ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಪರಮ ಪುಣ್ಯಕ್ಷೇತ್ರವಾದ ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯದ ಅಭಿವೃದ್ಧಿಗೆ ಸಮಸ್ತ ಭಕ್ತಾದಿಗಳು ಸಹಕಾರ ನೀಡುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ದೀಪೋತ್ಸವದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಹೆಚ್.ಎಸ್.ಗೋವಿಂದ ಸ್ವಾಮಿ ಕೋರಿದರು.
ಹೆಚ್ಚಿನ ಮಾಹಿತಿಗೆ 08272-295668, 9480730523, 9481959080, 9448647161, 9060646676 ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಭಕ್ತರಾದ ಎ.ಸಿ.ಚುಮ್ಮಿ ದೇವಯ್ಯ, ಕೆ.ಎಂ.ತಾರಾ ಪ್ರಸಾದ್ ಹಾಗೂ ಎಸ್.ಎನ್.ಹರೀಶ್ ಉಪಸ್ಥಿತರಿದ್ದರು.