ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಭಕ್ತಿಭಾವದಿಂದ ನೆರವೇರಿದ ದೀಪಾವಳಿ ದೀಪೋತ್ಸವ
admincoorgdaily

ಮಡಿಕೇರಿ ನ.11 : ನಗರದ ಕರ್ಣಂಗೇರಿ ಕ್ಷೇತ್ರದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯ ಪ್ರಯುಕ್ತ ದೀಪಾವಳಿ ದೀಪೋತ್ಸವವು ಭಕ್ತಿಭಾವ ಹಾಗೂ ಶ್ರದ್ಧೆಯಿಂದ ನೆರವೇರಿತು.
ದೀಪೋತ್ಸವದ ಅಂಗವಾಗಿ ಸಂಜೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ಕಳಸ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನದಾನ ನಡೆಯಿತು. ಭಕ್ತಾದಿಗಳಿಗೆ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ನಂತರ ದೀಪೋತ್ಸವ ಆರಂಭಗೊಂಡು ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಗ್ರಹದೋಷ ಮತ್ತು ಸಂಕಷ್ಟಗಳ ಪರಿಹಾರಕ್ಕಾಗಿ ಭಕ್ತಾದಿಗಳು ದೇವಸ್ಥಾನದ ಆವರಣದಲ್ಲಿ 108 ಎಳ್ಳು ಬತ್ತಿಗಳನ್ನು ಬೆಳಗಿಸಿ ದೀಪಾರಾಧನೆ ಸಲ್ಲಿಸಿದರು.
ದೇವಾಲಯವನ್ನು ಹಾಗೂ ದೇವಾಲಯದ ಆವರಣದಲ್ಲಿರುವ ಬೃಹದಾಕಾರದ ಶಿವನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು, ವಿದ್ಯುತ್ ದೀಪಾಲಂಕಾರವು ಉತ್ಸವದ ಮೆರುಗನ್ನು ಹೆಚ್ಚಿಸಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿ ಅಧಿಕ ಸಂಖ್ಯೆಯ ದೀಪಗಳನ್ನು ಬೆಳಗಿದರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಗೋವಿಂದ ಸ್ವಾಮಿ ಅವರು ಮಾತನಾಡಿ, ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯವು ಪರಮ ಪುಣ್ಯಕ್ಷೇತ್ರವಾಗಿದ್ದು, ದೇವಾಲಯದ ಅಭಿವೃದ್ಧಿಗೆ ಸಮಸ್ತ ಭಕ್ತಾದಿಗಳು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ದೀಪೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗಿದ್ದು, ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದರು.