Kodagu

ಬದುಕನ್ನು ಬರ್ಬರಗೊಳಿಸಿ ಕಸ್ತೂರಿರಂಗನ್ ವರದಿ ಜಾರಿ ಬೇಡ - ಕೆ.ಎಂ.ಎ.

admincoorgdaily

ಬದುಕನ್ನು ಬರ್ಬರಗೊಳಿಸಿ ಕಸ್ತೂರಿರಂಗನ್ ವರದಿ ಜಾರಿ ಬೇಡ - ಕೆ.ಎಂ.ಎ.
ಪೊನ್ನಂಪೇಟೆ, ಸೆ. 07:  ಕಸ್ತೂರಿರಂಗನ್ ವರದಿ ಜಾರಿಯಾದರೆ ವಿಶೇಷವಾಗಿ ಗ್ರಾಮೀಣ ಜನರ ಬದುಕು ಬಯಲು ಜೈಲಿನಂತಾಗುತ್ತದೆ. ಕೊಡಗಿನ ಬಹುಪಾಲು ಜನರ ಭಾವನೆಗೆ ವಿರುದ್ಧವಾಗಿರುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ  ಜಾರಿಗೊಳಿಸಬಾರದು. ಜನರ ಬದುಕನ್ನು ಬರ್ಬರಗೊಳಿಸುವ ಮತ್ತು ಮಾನವ ಹಕ್ಕನ್ನೇ ಉಲ್ಲಂಘಿಸುವ ಯಾವ ಯೋಜನೆಯ ಅನುಷ್ಠಾನವೂ ಜಿಲ್ಲೆಗೆ ಅಗತ್ಯವಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಈ ಕುರಿತು ಸೋಮವಾರದಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ 7ನೇ ಕರಡು ಅಧಿಸೂಚನೆಯನ್ನು ಇದೀಗ ಹೊರಡಿಸಿದೆ. ಈ ಕುರಿತು ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರಲ್ಲದೆ, ಸೆ. 04ರಂದು ವರದಿಯನ್ನು ವಿರೋಧಿಸುವ ಕುರಿತು ಮಡಿಕೇರಿಯಲ್ಲಿ ನಡೆದ ಸಭೆಗೆ ಜಿಲ್ಲೆಯ ಪ್ರಮುಖ ಎಲ್ಲಾ ಸಂಘಟನೆಗಳನ್ನು ಅಧಿಕೃತವಾಗಿ ಆಹ್ವಾನಿಸಿದ್ದರೂ, ಕೊಡವ ಮುಸ್ಲಿಂ ಅಸೋಸಿಯೇಷನ್ ನನ್ನು ನಿರ್ಲಕ್ಷಿಸಿದ ಕುರಿತು ಖೇದವಿದೆ. ಆದರೂ ಇದು ಜನರ ಮತ್ತು ಕೊಡಗಿನ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಸಾಮಾಜಿಕ ಹೊಣೆಗಾರಿಕೆಯ ನೆಲೆಗಟ್ಟಿನಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಆಂದೋಲನದಲ್ಲಿ ಕೆಎಂಎ ಸದಾ ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಸೂಫಿ ಹಾಜಿ ಸ್ಪಷ್ಟಪಡಿಸಿದರು.

ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿರುವ ಕಸ್ತೂರಿ ರಂಗನ್ ವರದಿ ಆಧಾರಿತ 7ನೇ ಕರಡು ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ ಒಟ್ಟು 53 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇ.ಎಸ್. ಎ.) ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಜಿಲ್ಲೆಯ ಪುಷ್ಪಗಿರಿ, ತಲಕಾವೇರಿ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರಮುಖ ಗ್ರಾಮಗಳು ಸೇರಿವೆ. ಕಸ್ತೂರಿರಂಗನ್ ವರದಿಯನ್ನು ಕೊಡಗಿನ ಜನರು ಹಲವು ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ಮೊದಲ ಅಧಿಸೂಚನೆಯಿಂದ ಹಿಡಿದು ನಂತರದ ಅಧಿಸೂಚನೆಗಳವರೆಗೂ ಕೊಡವ ಮುಸ್ಲಿಂ ಅಸೋಸಿಯೇಷನ್ ಕೂಡ  ವರದಿಯನ್ನು ವಿರೋಧಿಸಿಕೊಂಡು ಬಂದಿದೆ. ಆದರೂ ಮೇಲಿನಿಂದ ಮೇಲೆ ವರದಿ ಕುರಿತಂತೆ ಅಧಿಸೂಚನೆ ಹೊರ ಬರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದ ಸೂಫಿ ಹಾಜಿ, ಕೊಡಗಿನ ಹಲವು ಗ್ರಾಮಗಳಲ್ಲಿ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕಾಫಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಹೀಗಿರುವಾಗ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದರಿಂದ ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಜನರ ಬದುಕನ್ನೇ ನಾಶಗೊಳಿಸಿ ಪಶ್ಚಿಮಘಟ್ಟವನ್ನು ಸಂರಕ್ಷಿಸುವುದಾದರೆ ಇದರಿಂದ ಸಾಧಿಸುವುದಾದರೂ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಕೊಡಗಿನ ಬ್ರಹ್ಮಗಿರಿ, ತಲಕಾವೇರಿ, ಪುಷ್ಪಗಿರಿ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸಂರಕ್ಷಿತ ಅರಣ್ಯ ವಲಯಗಳಾಗಿವೆ. ಈ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳನ್ನು ಮತ್ತಷ್ಟು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರ ಅಗತ್ಯಗಳಿಗೆ ಸಂಬಂಧಿಸಿದ ಅನುಮತಿಗಳಿಗೆ ತೀವ್ರ ಸ್ವರೂಪದ ಅಡ್ಡಿಯಾಗಲಿದೆ. ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲ್ಪಟ್ಟ ಪ್ರದೇಶಗಳಲ್ಲಿ ಮೂಲಸೌಕರ್ಯಗಳಾದ ರಸ್ತೆ ನಿರ್ಮಾಣ, ಆಸ್ಪತ್ರೆ, ಶಾಲೆ ಮತ್ತು ವಿದ್ಯುತ್ ಮಾರ್ಗಗಳಂತಹ ಸಾರ್ವಜನಿಕ ಕಾಮಗಾರಿಗಳಿಗೆ ಕಠಿಣ ನಿರ್ಬಂಧಗಳು ಅನ್ವಯಿಸುತ್ತವೆ. ಇದು ಕೊಡಗಿನ ಜನರ ಸಹಜ ಬದುಕಿಗೆ ಮಾರಕವಾಗುತ್ತದೆ ಎಂಬುದು ಕೆಎಂಎ ನಿಲುವಾಗಿದೆ.  ಕಸ್ತೂರಿ ರಂಗನ್ ವರದಿಯ ನಿಯಮಗಳ ಪ್ರಕಾರ, ಸೂಕ್ಷ್ಮ ಪರಿಸರ ವಲಯಗಳಲ್ಲಿ ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ದುರಸ್ತಿ ಮಾಡಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಬಹುದು ಎಂಬ ಆತಂಕವಿದೆ ಎಂದು ವಿವರಿಸಿದರು. ಈ ವರದಿಯನ್ನು ಸಿದ್ಧಪಡಿಸುವಾಗ ತಜ್ಞರು ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿಯನ್ನು ಪರಿಶೀಲಿಸದೆ, ಕೇವಲ ಉಪಗ್ರಹ ಆಧಾರಿತ  ಚಿತ್ರಗಳು ಮತ್ತು ದೂರಸಂವೇದಿ ದತ್ತಾಂಶಗಳನ್ನು ಬಳಸಿ ಸೂಕ್ಷ್ಮ ಪರಿಸರ ವಲಯಗಳನ್ನು ಗುರುತಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರಿಂದಾಗಿ ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಗಳೂ ಕೂಡ ತಪ್ಪು ತಿಳುವಳಿಕೆಯಿಂದಾಗಿ ಪರಿಸರ ಸೂಕ್ಷ್ಮ ವಲಯದ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಹೇಳಿದ ಸೂಫಿ ಹಾಜಿ, ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಯಾವ ಪರಿಸರ ಸಂರಕ್ಷಣೆಯು ಸಾಧ್ಯವಿಲ್ಲ. ಸ್ಥಳೀಯವಾಗಿ ಬದುಕುತ್ತಿರುವ ಜನರು ತಮ್ಮ ಸುತ್ತಲಿನ ಪರಿಸರವನ್ನು  ಸಮುದಾಯದ ಆಸ್ತಿಯೆಂದು ಪರಿಗಣಿಸಿದರೆ ಮಾತ್ರ ಅರಣ್ಯ ಸಂಪತ್ತು ಸುಸ್ಥಿರವಾಗಿ ಉಳಿಯಬಲ್ಲದು ಎಂಬುದನ್ನು ಸರಕಾರಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕೇರಳದಲ್ಲಿ ಹಿಂದೆ ಕಸ್ತೂರಿರಂಗನ್ ಸಮಿತಿಯು ಕೇವಲ ಉಪಗ್ರಹ ಚಿತ್ರಗಳು ಮತ್ತು ವೈಮಾನಿಕ ದತ್ತಾಂಶಗಳನ್ನು ಬಳಸಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿತ್ತು. ಇದರಿಂದಾಗಿ ರಬ್ಬರ್ ತೋಟಗಳು, ಕೃಷಿ ಭೂಮಿ ಹಾಗೂ ದಟ್ಟ ಜನವಸತಿ ಪ್ರದೇಶಗಳೂ ಇಎಸ್‌ಎ ವ್ಯಾಪ್ತಿಗೆ ಸೇರಿದ್ದವು. ಇದನ್ನು ತೀವ್ರವಾಗಿ ವಿರೋಧಿಸಿದ ಕೇರಳದ ಅಂದಿನ ಸರಕಾರ, ಉಪಗ್ರಹ ಆಧಾರಿತ ಗಡಿ ಗುರುತಿಸುವಿಕೆಯನ್ನು ತಳ್ಳಿಹಾಕಿ, ಸ್ಥಳೀಯವಾಗಿ ತಳಮಟ್ಟದ ಸಮೀಕ್ಷೆ  ನಡೆಸಿತು. ಈ ಮೂಲಕ 123 ಗ್ರಾಮಗಳ ಪೈಕಿ ಇದ್ದ ಜನವಸತಿ ಪ್ರದೇಶಗಳು, ತೋಟಗಳು ಮತ್ತು ಕೃಷಿ ಭೂಮಿಯನ್ನು ಗುರುತಿಸಿ, ಅವುಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇವಲ ನೈಜವಾದ ಅರಣ್ಯ ಪ್ರದೇಶಗಳನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಬೇಕು. ದಶಕಗಳಿಂದ ವಾಸಿಸುತ್ತಿರುವ ಜನರನ್ನು ಅಥವಾ ಕೃಷಿ ಮಾಡುತ್ತಿರುವ ಜಾಗವನ್ನು ವಲಯದಿಂದ ಹೊರಗಿಟ್ಟು, ಅಲ್ಲಿ ಯಾವುದೇ ಹೊಸ ನಿರ್ಬಂಧಗಳನ್ನು ಹೇರಬಾರದು ಎಂಬ ಪ್ರಬಲವಾದ ಬೇಡಿಕೆಯನ್ನು ಕೇಂದ್ರದ ಮುಂದಿರಿಸಿತು. ಈ ಕೇರಳ ಮಾದರಿಯನ್ನೇ ರಾಜ್ಯ ಸರ್ಕಾರ ಅನುಸರಿಸಬೇಕು ಎಂದು ಆಗ್ರಹಿಸಿದ ಸೂಫಿ ಹಾಜಿ, ಕೇಂದ್ರ ಸರ್ಕಾರವು ಇತ್ತೀಚೆಗೆ ಹೊರಡಿಸಿದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಲು ಮತ್ತು ಈ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಲು ರಾಜ್ಯ ಸರ್ಕಾರವು ಸೆ. 21 ರಿಂದ 23 ರವರೆಗೆ ಕರೆದಿರುವ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನವನ್ನು ಕೊಡಗಿನ ಜನರ ಭಾವನೆಗೆ ಸರಕಾರ ಸ್ಪಂದಿಸುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರವು ಈ ವಿಷಯಕ್ಕೆ ಕುರಿತಂತೆ ಜನರ ಭಾವನೆಗೆ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೆ.ಎಂ.ಎ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಸಂಘಟನಾ ಕಾರ್ಯದರ್ಶಿ ಮಿತಲ್ತಂಡ ಇಸ್ಮಾಯಿಲ್, ನಿರ್ದೇಶಕರಾದ ಕೋಳುಮಂಡ ರಫೀಕ್ ಮತ್ತು ಆಲೀರ ಎಂ. ರಶೀದ್ ಉಪಸ್ಥಿತರಿದ್ದರು.