ತಂದೆಯಿಂದ 90 ಲಕ್ಷ ಕೀಳಲು ಮಗನ ಕಿಡ್ನಾಪ್ ಡ್ರಾಮಾ !
admincoorgdaily

ಬೆಂಗಳೂರು; ಸ್ವಂತ ತಂದೆಯಿಂದಲೇ ಹಣ ಸುಲಿಗೆ ಮಾಡಲು 40 ವರ್ಷದ ಮಗನೊಬ್ಬ ತಾನೇ ಅಪಹರಣದ ನಾಟಕವಾಡಿದ ಪ್ರಕರಣವನ್ನು ಆರ್.ಆರ್.ನಗರ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
62 ವರ್ಷದ ಮನೋಹರ್ ಪಟೇಲ್ ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದಾಗ ಮಗನ ಸಂಚು ಬಯಲಾಗಿದೆ. ಅಪಹರಣದ ನಾಟಕವಾಡಿ 90 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮನೀಷ್ ಪಟೇಲ್ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಗದಗದಲ್ಲಿ ಹಣಕಾಸು ವ್ಯವಹಾರವಿದೆ ಎಂದು ತಂದೆಗೆ ತಿಳಿಸಿ ಸೆ.28ರಂದು ಮನೀಷ್ ಮನೆಯಿಂದ ತೆರಳಿದ್ದ. ಮರುದಿನ ಬೆಳಗ್ಗೆ 8 ಗಂಟೆಗೆ ಮನೀಷ್ ಮೊಬೈಲ್ ನಿಂದ ತಂದೆಗೆ ವಾಟ್ಸಾಪ್ ಕರೆ ಬಂದಿದ್ದು, ಅಪರಿಚಿತ ವ್ಯಕ್ತಿಗಳು "ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದೇವೆ, 90 ಲಕ್ಷ ನೀಡದಿದ್ದರೆ ಕೊಲೆ ಮಾಡುತ್ತೇವೆ" ಎಂದು ಬೆದರಿಕೆ ಹಾಕಿದ್ದರು.
4-5 ಬಾರಿ ಕರೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಆತಂಕಗೊಂಡ ಮನೋಹರ್ ಪಟೇಲ್ ಅದೇ ದಿನ ಮಧ್ಯಾಹ್ನ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಲು ಯತ್ನಿಸಿದಾಗ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮತ್ತೆ ಅಪರಿಚಿತ ಸಂಖ್ಯೆಯಿಂದ "ಹಣ ಅರೇಂಜ್ ಆಯ್ತಾ?" ಎಂದು ಕರೆ ಬಂದಿತ್ತು. ಕರೆಯ ಸ್ಥಳ ಟ್ರ್ಯಾಕ್ ಮಾಡಿದ ಪೊಲೀಸರು ಹಾಸನ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.
ಸ್ಥಳಕ್ಕೆ ತೆರಳಿ ಬಾಗಿಲು ತೆಗೆದು ನೋಡಿದಾಗ ಮನೀಷ್ ಅಪಹರಣ ಮಾಡಿದವರು ಎನ್ನಲಾದ ಇಬ್ಬರ ಜೊತೆ ಯಾವುದೇ ಭಯವಿಲ್ಲದೆ ಜಾಲಿಯಾಗಿ ಕುಳಿತಿದ್ದ ದೃಶ್ಯ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದೀರ್ಘ ವಿಚಾರಣೆ ಬಳಿಕ ಇದು ತಂದೆಯಿಂದ 90 ಲಕ್ಷ ಸುಲಿಗೆ ಮಾಡಲು ಹೆಣೆದಿದ್ದ ಕಟ್ಟುಕಥೆ ಎಂದು ದೃಢಪಟ್ಟಿದ್ದು, ಮನೀಷ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.