ಸೆ.20ರಿಂದ ದುಬಾರೆ ಆನೆ ಶಿಬಿರ ಪುನರಾರಂಭ:ಹೊಸ SOP ಜಾರಿ
admincoorgdaily

ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ದುಬಾರೆ ಆನೆ ಶಿಬಿರವನ್ನು ಸೆ. 20, 2026 ರಿಂದ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಆನೆ ಶಿಬಿರಗಳಿಗಾಗಿ ರೂಪಿಸಲಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅನುಷ್ಠಾನಗೊಳಿಸಿದ ನಂತರ ಶಿಬಿರ ಪುನರಾರಂಭಿಸಲಾಗುತ್ತಿದೆ.
ಹೊಸ ನಿಯಮಗಳು ಹೀಗಿವೆ:
- ಆರಂಭಿಕ ಹಂತದಲ್ಲಿ ಬೆಳಿಗ್ಗೆ 9.30 ರಿಂದ 11.30 ರವರೆಗೆ ಮಾತ್ರ ಶಿಬಿರದ ಚಟುವಟಿಕೆಗಳು ಇರಲಿವೆ. ಪರಿಸ್ಥಿತಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅವಧಿ ವಿಸ್ತರಿಸಲಾಗುವುದು.
- ಸಾರ್ವಜನಿಕರು ಮತ್ತು ಆನೆಗಳ ನಡುವೆ ಯಾವುದೇ ನೇರ ದೈಹಿಕ ಸಂಪರ್ಕಕ್ಕೆ ಅವಕಾಶ ಇಲ್ಲ.
- ಪ್ರವಾಸಿಗರಿಂದ ಆನೆಗಳಿಗೆ ಸ್ನಾನ ಮಾಡಿಸುವುದು ಹಾಗೂ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
- ಪ್ರವಾಸಿಗರ ಪ್ರವೇಶವನ್ನು ಬ್ಯಾಚ್‌ಗಳಾಗಿ ಆಯೋಜಿಸಲಾಗುವುದು. ಪ್ರತಿ ಬ್ಯಾಚ್‌ಗೆ 45 ನಿಮಿಷ ಕಾಲಾವಕಾಶ ಮತ್ತು ಗರಿಷ್ಠ 150 ಮಂದಿಗೆಮಾತ್ರ ಅವಕಾಶ ಇರಲಿದೆ.
- ಶಿಬಿರದ ವೀಕ್ಷಣೆ ಮತ್ತು ಮಾಹಿತಿಯನ್ನು ಶಿಬಿರದ ಮಾರ್ಗದರ್ಶಕರ (Camp Guide) ನೇತೃತ್ವದಲ್ಲಿ ನೀಡಲಾಗುವುದು.
ದುಬಾರೆಗೆ ಆಗಮಿಸುವ ಪ್ರವಾಸಿಗರು ಅರಣ್ಯ ಇಲಾಖೆ ಮತ್ತು ಸಿಬ್ಬಂದಿ ನೀಡುವ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆನೆಗಳ ಕಲ್ಯಾಣ, ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಕೋರಿದೆ.