ಸಿದ್ದಾಪುರದಲ್ಲಿ DYFI ಜಿಲ್ಲಾ ಸಮ್ಮೇಳನ: ನಿರುದ್ಯೋಗ ವಿರುದ್ಧ ಹೋರಾಟಕ್ಕೆ ಕರೆ
admincoorgdaily

ವಿರಾಜಪೇಟೆ: ಸೆಪ್ಟೆಂಬರ್ 26 ರಿಂದ 28 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆಯಲಿರುವ ಡಿವೈಎಫ್‌ಐನ 13ನೇ ರಾಜ್ಯ ಸಮ್ಮೇಳನದ ಭಾಗವಾಗಿ, ಡಿವೈಎಫ್‌ಐನ ಕೊಡಗು ಜಿಲ್ಲಾ ಸಮ್ಮೇಳನವು ಸಿದ್ದಾಪುರದ ಗುಯ್ಯ ಅಗಸ್ತೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಡಿವೈಎಫ್‌ಐ ಮಾಜಿ ಜಿಲ್ಲಾ ಅಧ್ಯಕ್ಷರಾದ ಭಾಗ್ಯ ಚಂಗಪ್ಪ ಅವರು ಸಂಘಟನೆಯ ಧ್ವಜಾರೋಹಣ ನೆರವೇರಿಸಿದರು.
ಸಮ್ಮೇಳನವನ್ನು ಡಿವೈಎಫ್‌ಐ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸಂತೋಷ್ ಬಜಾಲ್ ಅವರು ಉದ್ಘಾಟಿಸಿ ಮಾತನಾಡಿ,"ಕೇಂದ್ರ ಸರಕಾರದ ಯುವ ವಿರೋಧಿ ನೀತಿಗಳು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಯುವ ಜನರು ಒಗ್ಗೂಡಿ ಹೋರಾಡಬೇಕಾಗಿದೆ. ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡದೆ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಯುವಕರನ್ನು ವಂಚಿಸಲಾಗುತ್ತಿದೆ. ನಿರುದ್ಯೋಗ ಸೃಷ್ಟಿ ಮಾಡುವ ಸರಕಾರದ ಜನವಿರೋಧಿ ಧೋರಣೆಯನ್ನು ಪ್ರಶ್ನಿಸಿ ಪ್ರಬಲ ಹೋರಾಟ ಕಟ್ಟಬೇಕು ಹಾಗೂ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ಯುವಜನತೆ ಮುಂಚೂಣಿಯಲ್ಲಿ ನಿಲ್ಲಬೇಕು"ಎಂದು ಕರೆ ನೀಡಿದರು.
ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಡಿವೈಎಫ್‌ಐ ವಯನಾಡು ಜಿಲ್ಲಾ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಜಿತಿನ್ ಕೋಮತ್ ಅವರು ಮಾತನಾಡಿ, "23ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ÷್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಧೀರ ಯೋಧ ಭಗತ್ ಸಿಂಗ್ ಅವರ ಕನಸಿನ ಭಾರತವನ್ನು ಕಟ್ಟಲು ಯುವಜನರು ಬೀದಿಗಿಳಿದು ಹೋರಾಡಬೇಕಿದೆ. ಯುವಜನರನ್ನು ವಂಚಿಸುವ ಸರಕಾರಗಳ ವಿರುದ್ಧ ನಿರಂತರ ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಎಲ್ಲರಿಗೂ ಉದ್ಯೋಗ ಹಾಗೂ ಜಾತಿ-ಧರ್ಮ ರಹಿತ ಸೌಹಾರ್ದ ಭಾರತವನ್ನು ಕಟ್ಟಲು ಯುವಜನತೆ ಒಂದಾಗಬೇಕಿದೆ. ಜನರನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವ ಕೋಮುವಾದಿ ಶಕ್ತಿಗಳ ವಿರುದ್ಧ ಯುವಜನರು ಜಾಗೃತರಾಗಿರಬೇಕು ಎಂದು ಹೇಳಿದರು.
ದೇಶದಲ್ಲಿ ಯುವಜನರು ಎದುರಿಸುತ್ತಿರುವ ತೀವ್ರ ಸ್ವರೂಪದ ನಿರುದ್ಯೋಗದ ಸಮಸ್ಯೆಗಳು ಹಾಗೂ ಯುವಜನರನ್ನು ವಂಚಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಡಿವೈಎಫ್‌ಐ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕಾದ ಅಗತ್ಯತೆಯ ಕುರಿತು ಡಿವೈಎಫ್‌ಐ ಮಾಜಿ ಜಿಲ್ಲಾ ಮುಖಂಡ ಪಿ.ಆರ್. ಭರತ್ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಎನ್.ಕೆ. ಅನಿಲ್, ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಉಪಸ್ಥಿತರಿದ್ದರು.
ನೂತನ ಜಿಲ್ಲಾ ಸಮಿತಿ ಆಯ್ಕೆ:
ಸಮ್ಮೇಳನದ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಸಂಘಟನೆಯನ್ನು ಮುನ್ನಡೆಸಲು 13 ಸದಸ್ಯರನ್ನು ಒಳಗೊಂಡ ನೂತನ ಜಿಲ್ಲಾ ಸಮಿತಿಯನ್ನು ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಜ್ಯೋತಿ ಕೃಷ್ಣ (ನೆಲ್ಲಿಹುದಿಕೇರಿ), ಕಾರ್ಯದರ್ಶಿ ಸಾಧಿಕ್ ಎ.ಎಚ್. (ಕುಂಜಿಲ), ಖಜಾಂಚಿ ರಿಯಾಜ್ ಪಿ.ಎಚ್. (ಗುಯ್ಯ ಸಿದ್ದಾಪುರ) ಆಯ್ಕೆಗೊಂಡರು.
ಅಲ್ಲದೆ, ಬಾಗೇಪಲ್ಲಿಯಲ್ಲಿ ನಡೆಯಲಿರುವ 13ನೇ ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ 6 ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮುಂಬರುವ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಯುವಜನರ ಹಕ್ಕುಗಳಿಗಾಗಿ, ಉದ್ಯೋಗಾವಕಾಶಗಳಿಗಾಗಿ ಹಾಗೂ ಯುವಜನರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ವಿರುದ್ಧ ಡಿವೈಎಫ್‌ಐ ನೇತೃತ್ವದಲ್ಲಿ ತೀವ್ರ ರೀತಿಯ ಹೋರಾಟಗಳನ್ನು ರೂಪಿಸುವುದಾಗಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಿಳಿಸಿದರು.