ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸಿದ್ದಾಪುರದಲ್ಲಿ DYFI ಪ್ರತಿಭಟನೆ
admincoorgdaily

ವಿರಾಜಪೇಟೆ: ದೇಶದ 13 ಕೋಟಿಗೂ ಹೆಚ್ಚು ಸಾಮಾನ್ಯ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಕೇಂದ್ರ ಸರ್ಕಾರದ ನಡವಳಿಕೆಗೆ ಕೈಜೋಡಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ DYFI ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಸಂಘಟಿಸಲಾಯಿತು. ಜನವಿರೋಧಿ SIR ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಮತದಾರರ ಪಟ್ಟಿಯಿಂದ ಕೈಬಿಡಲಾದ ಎಲ್ಲಾ ಭಾರತೀಯರನ್ನು ತಕ್ಷಣವೇ ಮರಳಿ ಸೇರಿಸಿಕೊಳ್ಳಬೇಕು ಎಂದು ಸಭೆಯು ಆಗ್ರಹಿಸಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ DYFI ಕೊಡಗು ಜಿಲ್ಲಾ ಕಾರ್ಯದರ್ಶಿ ಸಾದಿಕ್ ಎ.ಎಚ್ ಮಾತನಾಡಿದರು. ದೇಶದ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಅವರು ಸಂಪೂರ್ಣ ಬೆಂಬಲ ಸೂಚಿಸಿದರು. ಕೇಂದ್ರ ಸರ್ಕಾರವು ಪೋಲಿಸರನ್ನು ಬಳಸಿಕೊಂಡು ದೇಶದಲ್ಲಿ ಗುಂಡಾಗಿರಿ ನಡೆಸುತ್ತಿದೆ ಎಂದು ಸಾದಿಕ್ ಆರೋಪಿಸಿದರು.
DYFI ಅಖಿಲ ಭಾರತ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಎ.ಎ. ರಹೀಮ್, ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು ಹಾಗೂ ಸಾವಿರಾರು ವಿದ್ಯಾರ್ಥಿ-ಯುವಜನರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. SFI ಗುಜರಾತ್ ರಾಜ್ಯ ಕಾರ್ಯದರ್ಶಿ ಆಡ್ವ. ಸತ್ಯೇಶ, ಯು.ಪಿ DYFI ರಾಜ್ಯ ಕಾರ್ಯದರ್ಶಿ ರಾಜ್‌ಕುಮಾರ್, ಹರಿಯಾಣ ರಾಜ್ಯ ಕಾರ್ಯದರ್ಶಿ ನರೇಶ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ. ಪೋಲಿಸರನ್ನು ಮುನ್ನೆಲೆಯಲ್ಲಿಟ್ಟು ಯುವಜನರ ಹೋರಾಟದ ಕಿಚ್ಚನ್ನು ಹತೋಟಿಯಲ್ಲಿಡಬಹುದು ಎಂಬುದು ಕೇಂದ್ರ ಸರ್ಕಾರದ ಭ್ರಮೆಯಾಗಿದ್ದು, ಎಷ್ಟೇ ದೌರ್ಜನ್ಯ ಎಸಗಿದರೂ ಹೋರಾಟವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ DYFI ಮಾಜಿ ಜಿಲ್ಲಾ ಸಮಿತಿ ಸದಸ್ಯ ಎನ್.ಕೆ. ಅನಿಲ್ ಮಾತನಾಡಿದರು. DYFI ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ರೋಷನ್ ಬಾಗವಹಿಸಿದರು DYFI ಕೊಡಗು ಜಿಲ್ಲಾ ಅಧ್ಯಕ್ಷ ಜ್ಯೋತಿ ಕೃಷ್ಣ ವಂದಿಸಿದರು.