ಕೆದಮುಳ್ಳೂರು ದೀರ್ಘಾವಧಿ ಸೇವೆ ಸಲ್ಲಿಸಿದ ಅಂಗನವಾಡಿ ಶಿಕ್ಷಕಿಯರಿಗೆ ಭಾವಪೂರ್ಣ ಬೀಳ್ಕೊಡುಗೆ ಹಾಗೂ ಸನ್ಮಾನ
admincoorgdaily

ವಿರಾಜಪೇಟೆ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೀರ್ಘಾವಧಿಗೆ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ಹಿರಿಯ ಅಂಗನವಾಡಿ ಶಿಕ್ಷಕಿಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಕೊಟ್ಟೋಳಿ ಗ್ರಾಮದ ಅಂಗನವಾಡಿಯಲ್ಲಿ ಸುಮಾರು 36 ವರ್ಷಗಳ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿ ಜೂನ್ ತಿಂಗಳಿನಲ್ಲಿ ನಿವೃತ್ತರಾದ ಕುಮಾರಿ ಸಿ.ಪಿ. ತಾರಾಮಣಿ ಹಾಗೂ ತೋಮರ ಅಂಗನವಾಡಿಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ 2024ರಲ್ಲಿ ನಿವೃತ್ತರಾದ ಬಿ.ಯು ವಸಂತಿ ಅವರುಗಳಿಗೆ ಸನ್ಮಾನ ನೆರವೇರಿಸಲಾಯಿತು.
ಕಾರಣಾಂತರಗಳಿಂದ ಇಬ್ಬರೂ ಶಿಕ್ಷಕಿಯರಿಗೆ ನಿವೃತ್ತಿಯ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಇಬ್ಬರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಚುನಾಯಿತ ಪ್ರತಿನಿಧಿಗಳು, ನಾಯಕರು ಹಾಗೂ ಅಧಿಕಾರಿಗಳು ಭಾಗವಹಿಸಿ ನಿವೃತ್ತ ಶಿಕ್ಷಕಿಯರ ಸೇವೆಯನ್ನು ಸ್ಮರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ಕೆ. ಉತ್ತಪ್ಪ, ನಡಿಕೇರಿಯಂಡ ಶೀಲಾ ಮೇದಪ್ಪ, ಸದಸ್ಯರುಗಳಾದ ಇಸ್ಮಾಯಿಲ್, ಪ್ರಶಾಂತ್ ಉತ್ತಪ್ಪ ಮತ್ತು ಸಾಬಾ ಮುತ್ತಪ್ಪ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ ಅವರು ನಿವೃತ್ತ ಶಿಕ್ಷಕೆ ಸೇವೆಯನ್ನು ಶ್ಲಾಘಿಸಿದರಲ್ಲದೆ ನಿವೃತ್ತ ಜೀವನ ಸುಖಕರವಾಗಿರಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿ ವರ್ಗ, ಸ್ಥಳಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿ ಶಿಕ್ಷಕಿಯರ ಭವಿಷ್ಯದ ಜೀವನಕ್ಕೆ ಉತ್ತಮ ಆರೋಗ್ಯ ಹಾಗೂ ಸುಖ-ಶಾಂತಿ ಸಿಗಲೆಂದು ಶುಭ ಕೋರಿ ಮಾತನಾಡಿದರು.