Kodagu

ಕುಶಾಲನಗರದ ಕೆರೆಗಳಿಗೆ ಒತ್ತುವರಿ ಕಂಟಕ: 139ರಲ್ಲಿ 68 ಕೆರೆಗಳು ಒತ್ತುವರಿ ಆರೋಪ

admincoorgdaily

ಸಾಂದರ್ಭಿಕ ಚಿತ್ರ
ಕುಶಾಲನಗರ(ಕೂರ್ಗ್ ಡೈಲಿ): ಕೊಡಗು ಜಿಲ್ಲೆ ಕಾವೇರಿ ನದಿಯ ಉಗಮ ಸ್ಥಾನ. ಈ ನದಿ ನೀರು ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜೀವನಾಡಿ. ಆದರೆ ಉಗಮ ಜಿಲ್ಲೆಯಲ್ಲೇ ಜಲಮೂಲಗಳಿಗೆ ಕುತ್ತು ಬಂದಿದೆ. ಕುಶಾಲನಗರ ತಾಲ್ಲೂಕಿನಲ್ಲಿ 139 ಸರ್ಕಾರಿ ಕೆರೆಗಳ ಪೈಕಿ ಬರೋಬ್ಬರಿ 68 ಕೆರೆಗಳು ಒತ್ತುವರಿಗೆ ಒಳಗಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತಾಲ್ಲೂಕಿನಲ್ಲಿರುವ 139 ಕೆರೆಗಳ ಒಟ್ಟು ವಿಸ್ತೀರ್ಣ ಸುಮಾರು 258 ಎಕರೆ. ಇದರಲ್ಲಿ ಅರ್ಧದಷ್ಟು ಕೆರೆಗಳು ಒತ್ತುವರಿಯಾಗಿವೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ದಾಖಲೆಯಲ್ಲಿ ತೆರವು, ಸ್ಥಳದಲ್ಲಿ ಒತ್ತುವರಿ!

ಅಧಿಕಾರಿಗಳ ದಾಖಲೆ ಪ್ರಕಾರ ಎಲ್ಲಾ 68 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಉಲ್ಲೇಖವಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ತೆರವು ಎಂದು ತೋರಿಸಿರುವ ಕೆರೆಗಳಲ್ಲೇ ಇಂದಿಗೂ ಒತ್ತುವರಿ ಮುಂದುವರಿದಿದೆ, ಒತ್ತುವರಿದಾರರಿಗೆ ನೋಟಿಸ್ ನೀಡಿಲ್ಲ, ಪ್ರಕರಣ ದಾಖಲಿಸಿಲ್ಲ, ಸ್ಥಳ ಪರಿಶೀಲನೆಯೂ ನಡೆದಿಲ್ಲ ಎಂದು ಸ್ಥಳೀಯರಾದ ಮಲ್ಲೇಶ್ ಮತ್ತು ಸಾಮಾಜಿಕ ಕಾರ್ಯಕರ್ತ ಮೋಹನ್ ಆರೋಪಿಸಿದ್ದಾರೆ.

ಬೋಗಣಿ ಕೆರೆ ಸೇರಿದಂತೆ ಹಲವು ಕೆರೆಗಳ ಸ್ಥಿತಿಯೂ ಇದೇ ಆಗಿದೆ. ಸರ್ಕಾರ ಸರ್ವೇಗೆ ಆದೇಶ ನೀಡಿದರೂ ಅನುಷ್ಠಾನವಾಗಿಲ್ಲ. ಕಾಗದದಲ್ಲಿ ಮಾತ್ರ ಕೆರೆಗಳು ಸುರಕ್ಷಿತವಾಗಿದ್ದು, ವಾಸ್ತವದಲ್ಲಿ ನಾಪತ್ತೆಯಾಗುತ್ತಿವೆ. ಕೆರೆಗಳ ಸಮಗ್ರ ಸರ್ವೇ ನಡೆಸಿ, ಒತ್ತುವರಿ ತೆರವು, ಹೂಳೆತ್ತುವಿಕೆ ಮತ್ತು ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.