ವ್ಯಕ್ತಿಗೆ ಸಾವು ಬಂದರೂ ಕಲೆ ಸದಾ ಜೀವಂತ: ವಿರಾಜಪೇಟೆಯಲ್ಲಿ 51 ದಿನಗಳ 'ಕಲಾ ಉತ್ಸವ ಕೊಡಗು-2026'ಕ್ಕೆ ಚಾಲನೆ
admincoorgdaily

ವಿರಾಜಪೇಟೆ: ಇಂದಿನ ದಿನಗಳಲ್ಲಿ ಚಿತ್ರಕಲೆಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳು ಕ್ಷೀಣಿಸಿವೆ ಹಾಗೂ ಕಲಾವಿದರನ್ನು ಗೌರವಿಸುವುದು ಕಡಿಮೆಯಾಗಿದೆ. ವ್ಯಕ್ತಿಗೆ ಸಾವು ಬಂದರೂ ಆತನ ಕಲೆಗಳು ಸದಾ ಜೀವಂತವಾಗಿರುತ್ತವೆ ಎಂದು ವಿರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಮೊಹಮ್ಮದ್ ರಾಫಿ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಆರ್ಜಿ ಗ್ರಾಮದ ಕೆ.ಎನ್. ಉಪೇಂದ್ರ ಅವರ ಖಾಸಗಿ ಸ್ಥಳದಲ್ಲಿ, ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಕೊಡಗು ಸಹಯೋಗದಲ್ಲಿ ಆಯೋಜಿಸಿರುವ 10ನೇ ವರ್ಷದ 'ಕಲಾ ಉತ್ಸವ ಕೊಡಗು-2026' ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಚಿತ್ರಕಲೆಗಳನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ಮತ್ತು ಆರ್ಥಿಕವಾಗಿ ಸಹಾಯ ಮಾಡಿದಲ್ಲಿ ಕಲೆ ಹಾಗೂ ಕಲೆಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿದಂತಾಗುತ್ತದೆ. ಸತತ 10 ವರ್ಷಗಳಿಂದ ಕಲಾಸಾಧಕರಾಗಿ ದುಡಿಯುತ್ತಿರುವ ಸಾಧಿಕ್ ಅವರ ಕಲಾ ರಥವು ಹೀಗೆಯೇ ಮುಂದೆ ಸಾಗಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಮಾತನಾಡಿದ ಬೈರಂಬಾಡ ಗ್ರಾಮದ ಹಿರಿಯ ವುಡ್ ಆರ್ಟ್ ಕಲಾವಿದ ಮುಕ್ಕಾಟಿರ ವಿಠಲ್ ಸೋಮಯ್ಯ ಅವರು, ದೇಹಕ್ಕೆ ವಯಸ್ಸಾದರೂ ಕಲೆಗೆ ಎಂದಿಗೂ ವಯಸ್ಸಾಗುವುದಿಲ್ಲ. ಮನುಷ್ಯ ತಾನು ಬದುಕಿರುವಾಗ ಸಾಧಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಸತ್ತ ಬಳಿಕವೂ ಸಮಾಜ ಆತನ ಗುಣಗಾನ ಮಾಡುವಂತಾಗಬೇಕಾದರೆ ಅದು ಕೇವಲ ಕಲಾವಿದನಾಗಿದ್ದರೆ ಮಾತ್ರ ಸಾಧ್ಯ ಎಂದರು. ಚಿತ್ರಕಲೆ ಹಾಗೂ ಕಲೆಗೆ ಸಂಬಂಧಿಸಿದ ವಿಷಯಗಳಿಗೆ ಜೀವ ತುಂಬುವ ಕಲೆಗಾರರಿಗೆ ಸೂಕ್ತ ಮನ್ನಣೆ ದೊರಕುವಂತಹ ಶಿಬಿರಗಳು ನಿರಂತರವಾಗಿ ಆಯೋಜನೆಗೊಳ್ಳಬೇಕು ಹಾಗೂ ಸಾರ್ವಜನಿಕರಿಂದ ಪ್ರೋತ್ಸಾಹ ದೊರೆತಾಗ ಮಾತ್ರ ಇಂತಹ ಶಿಬಿರಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ತಿಳಿಸಿದರು.
ಶಿಬಿರದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಭಾರತೀಯ ವಿದ್ಯಾಭವನದ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್, ಇಂದು ಚಿತ್ರಕಲೆಗಳನ್ನು ಬಿಡಿಸುವ ಕಲಾವಿದರು ತೆರೆಮರೆಯಲ್ಲಿದ್ದು, ತಮ್ಮ ಕಲಾ ಹವ್ಯಾಸವನ್ನು ಬಿಟ್ಟು ಜೀವನ ಸಾಗಿಸಲು ಬೇರೆ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ. ಕಲೆಗಳನ್ನು ಜೀವಂತವಾಗಿರಿಸಲು ಇಂತಹ ಶಿಬಿರಗಳನ್ನು ಆಯೋಜಿಸಿದಲ್ಲಿ ಕಲೆಗಾರರನ್ನು ಬೆಳಕಿಗೆ ತರಬಹುದು; ಜೀವನೋತ್ಸಹ ಇದ್ದರೆ ಏನನ್ನಾದರೂ ಸಾಧಿಸಬಹುದು, ಈ ನಿಟ್ಟಿನಲ್ಲಿ ಸಾಧಿಕ್ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಚಿತ್ರಕಲಾವಿದ ರೂಪೇಶ್ ನಾಣಯ್ಯ ಮಾತನಾಡಿ, ನಮ್ಮದೇ ಕಲಾ ಚಿತ್ರಕಲೆಗಳನ್ನು ಇಲ್ಲಿನ ಕಲಾ ಪ್ರದರ್ಶನದಲ್ಲಿ ತಂದಿಟ್ಟಿರುವುದು ಹಾಗೂ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷವೂ ಈ ಉತ್ಸವದಲ್ಲಿ ಭಾಗವಹಿಸುತ್ತಿರುವುದು ನಮಗೂ ಹೆಮ್ಮೆ ತಂದಿದೆ. ಸಾಧಿಕ್ ಅವರ ಈ ಕಲಾ ಚಟುವಟಿಕೆ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಕೋರಿದರು.
ಕಲಾ ಉತ್ಸವಕ್ಕೆ ತಮ್ಮ ಸ್ಥಳವನ್ನು ಉದಾರವಾಗಿ ನೀಡಿರುವ ಆರ್ಜಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಮಾತನಾಡಿ, ಕಲಾವಿದರನ್ನು ಒಂದೆಡೆ ಸೇರಿಸಿ ಕಲೆಗೆ ಜೀವ ತುಂಬುತ್ತಿರುವ ಈ ಶಿಬಿರದ ಆಯೋಜನೆ ಮತ್ತು ಸದುದ್ದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ನಯಾಜ್ ಮಾತನಾಡಿ ಕಲೆಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು. ಸಾಧಿಕ್ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾ ಸೇವೆಯಲ್ಲಿ ತೊಡಗಿರುವುದು ಮಾದರಿಯಾಗಿದೆ. ಇಂತಹ ಸುಂದರ ವಾತಾವರಣದಲ್ಲಿ ಕಲಾ ಶಿಬಿರವನ್ನು ನಿರ್ಮಿಸಿರುವುದು ನಿಜಕ್ಕೂ ಖುಷಿಯ ವಿಚಾರ ಎಂದರು.
ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ವೇದಿಕೆಗಳು ಅತ್ಯಗತ್ಯ. ಪ್ರಕೃತಿಯ ನಡುವೆ ಮಕ್ಕಳಿಗೆ ಹಾಗೂ ಕಲಾಸಕ್ತರಿಗೆ ಕಲೆಯನ್ನು ಪರಿಚಯಿಸುತ್ತಿರುವ ಸಾಧಿಕ್ ಅವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಸುಲೈಮಾನ್ ಮಾತನಾಡಿ ಸಾಧಿಕ್ ಅವರ ನಿರಂತರ ಕಲಾ ಸೇವೆ ನಿಜಕ್ಕೂ ಮೆಚ್ಚತಕ್ಕದ್ದು. ಇದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಿದೆ. ಕಳೆದ ಹಲವಾರು ವರ್ಷಗಳಿಂದ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿದ್ದು, ಇವರ ಕಲಾ ಸೇವೆ ಹೀಗೆಯೇ ನಿರಂತರವಾಗಿರಲಿ ಎಂದರು.
ಸಾಹಿತಿ ರಜಿತಾ ಕಾರ್ಯಪ್ಪ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ವಿಭಿನ್ನ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಏಕೈಕ ವ್ಯಕ್ತಿ ಸಾಧಿಕ್. ಇವರ ಈ ಪರಿಶ್ರಮಕ್ಕೆ ಕುಟುಂಬ ವರ್ಗದವರೂ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರಕಥೆ ಹಾಗೂ ಚಿತ್ರಗಾರನಾಗಿ ವಿವಿಧ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು, ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಕಲೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕೊಡಗಿನಲ್ಲಿ ಕಲಾ ಚಟುವಟಿಕೆಗಳು ಹಾಗೂ ಚಿತ್ರರಚನೆಕಾರರು ಕಡಿಮೆ ಇರುವ ಸನ್ನಿವೇಶದಲ್ಲಿ, ಪ್ರಕೃತಿಯ ಮಧ್ಯೆ 51 ದಿನಗಳ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಬೇಕು ಎಂದರು.
ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ ಮಾತನಾಡಿ, ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ನನ್ನ ಹಳೆಯ ಒಡನಾಡಿ ಸಾಧಿಕ್ ಅವರಿಗೆ ಕಲೆಯ ಮೇಲಿರುವ ಗಾಢವಾದ ಒಲವು ಮತ್ತು ಸಮರ್ಪಣಾ ಭಾವವೇ ಇಂತಹ ಬೃಹತ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಸಾಧಿಕ್ ಆರ್ಟ್ಸ್ ಲಿಂಕ್ನ ಮಾಲೀಕರು ಹಾಗೂ ಶಿಬಿರದ ಆಯೋಜಕ ಸಾಧಿಕ್ ಹಂಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಮನಸ್ಸಿಗೆ ಮುದ ನೀಡುತ್ತದೆ. ನನ್ನ ಹವ್ಯಾಸ ಇಂದು ಇಷ್ಟು ದೊಡ್ಡ ವೇದಿಕೆ ಕಲ್ಪಿಸಿದೆ. ಕೊಡಗಿನಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಬೇಕು ಎಂದರು.
51 ದಿನಗಳ ಕಲಾ ಶಿಬಿರ ಹಾಗೂ ಪ್ರದರ್ಶನ:
ಪ್ರಕೃತಿಯ ಮಡಿಲಲ್ಲಿ ಆಯೋಜನೆಗೊಂಡಿರುವ ಈ ಕಲಾ ಉತ್ಸವದಲ್ಲಿ ಕೊಡಗಿನ ವಿವಿಧ ಕಲಾವಿದರ ಆಕರ್ಷಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಮುಂದಿನ 51 ದಿನಗಳ ಕಾಲ ಇಲ್ಲಿ ವಿವಿಧ ರೀತಿಯ ಕಲಾ ಶಿಬಿರಗಳು ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ವಿವಿಧ ಕಲಾ ಪ್ರಕಾರಗಳ ಕುರಿತು ತರಬೇತಿ ಮತ್ತು ಕಲಿಕೆಯನ್ನು ಮುಂದುವರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿತ್ರಕಲಾವಿದರು, ಕಲಾಸಕ್ತರು, ಸಾರ್ವಜನಿಕರು ಹಾಗೂ ಕುಟುಂಬ ವರ್ಗದ ಸದಸ್ಯರು ಉಪಸ್ಥಿತರಿದ್ದರು.