ಆಸ್ಪತ್ರೆಯಲ್ಲಿ 24 ಗಂಟೆ ದಾಖಲಾಗದೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರೂ ವಿಮಾ ಕಂಪೆನಿ ಪರಿಹಾರ ನೀಡಲೇಬೇಕು ; ಹೈ ಕೋರ್ಟ್
admincoorgdaily

ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು: ಸಾಮಾನ್ಯವಾಗಿ ಎಲ್ಲಾ ವಿಮಾ ಕಂಪೆನಿಗಳೂ ತಮ್ಮ ಗ್ರಾಹಕರು ಆಸ್ಪತ್ರೆಯಲ್ಲಿ 24 ಘಂಟೆ ಕಳೆದಿದ್ದರೆ ಮಾತ್ರ ವಿಮಾ ಪರಿಹಾರ ನೀಡುತ್ತವೆ. ವಿಮಾದಾರರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗದೇ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಾಗಲೂ ಸ್ಕ್ಯಾನಿಂಗ್ ,ಚೆಕಪ್ , ಕನ್ಸಲ್ಟೇಷನ್ ಇತ್ಯಾದಿಯಾಗಿ ಬಿಲ್ ಸಾವಿರಗಟ್ಟಲೇ ಬರುತ್ತದೆ. ಇದೀಗ ವಿಮಾದಾರರಿಗೆ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಇನ್ನು ಮುಂದೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗದಿದ್ದರೂ ಚಿಕಿತ್ಸೆ ವೆಚ್ಚ ನೀಡಲೇಬೇಕೆಂದು ಆದೇಶಿಸಿದೆ.
ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಕಾರಣದಿಂದ ಆಸ್ಪತ್ರೆಯಲ್ಲಿ 24 ತಾಸು ಉಳಿದು ಚಿಕಿತ್ಸೆ ಪಡೆಯಬೇಕು ಎಂಬುದು ಕಡ್ಡಾಯವಲ್ಲ. ಆಸ್ಪತ್ರೆಗೆ ದಾಖಲಾಗದೇ ಪಡೆಯುವ ಕ್ಯಾನ್ಸರ್ ಚಿಕಿತ್ಸೆಯ ಇಂಜೆಕ್ಷನ್‌ಗಳ ವೆಚ್ಚವನ್ನು ಭರಿಸಲು ವಿಮಾ ಕಂಪನಿ ಸಾಧ್ಯವಿಲ್ಲ ಎನ್ನಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ, ತಾಂತ್ರಿಕ ಕಾರಣಗಳನ್ನು ನೀಡಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸದೇ, ನಿವೃತ್ತ ಬ್ಯಾಂಕ್ ನೌಕರರೊಬ್ಬರು ನ್ಯಾಯಾಂಗ ಹೋರಾಟ ನಡೆಸಿದ ಪರಿಣಾಮ ಹೆಚ್ಚುವರಿ ಪರಿಹಾರವಾಗಿ 50 ಸಾವಿರ ರೂ.ಗಳನ್ನು ಪಾವತಿಸಲು ಹೈಕೋರ್ಟ್ ನಿರ್ದೇಶಿಸಿದೆ.
ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಂಗಳೂರಿನ ನಿವಾಸಿ ಜಿ.ಪದ್ಮನಾಭ ಶೆಟ್ಟಿ ಎಂಬವರಿಗೆ ಕ್ಯಾನ್ಸರ್ಗೆ ಪಡೆದ ಇಂಜೆಕ್ಷನ್ಗಳ ವೆಚ್ಚವನ್ನು ಭರಿಸುವಂತೆ ಲೋಕ ಅದಾಲತ್ ನೀಡಿದ್ದ ಆದೇಶವನ್ನು ರದ್ದು ಕೋರಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ಅಲ್ಲದೇ, ಆಸ್ಪತ್ರೆಗೆ ದಾಖಲಾಗುವುದು ಚಿಕಿತ್ಸೆ ನೀಡುವ ಒಂದು ವಿಧಾನವೇ ಹೊರತು ಅದಷ್ಟೇ ಅಂತಿಮವಲ್ಲ. ವೈದ್ಯಕೀಯ ವಿಜ್ಞಾನದ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಹಿಂದೆ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಂಡು ಪಡೆಯಬೇಕಿದ್ದ ಚಿಕಿತ್ಸೆಯನ್ನು ಈಗ ಅತ್ಯಂತ ಸುರಕ್ಷಿತವಾಗಿ ಹೊರ ರೋಗಿಯಾಗಿ ಕೆಲವೇ ನಿಮಿಷಗಳಲ್ಲಿ ಪಡೆಯಲು ಸಾಧ್ಯವಿದೆ. ತಂತ್ರಜ್ಞಾನ ಮುಂದುವರೆದಿದೆ ಎಂಬ ಕಾರಣಕ್ಕೆ ವಿಮೆ ನಿರಾಕರಿಸುವುದು ಅತ್ಯಂತ ಹಾಸ್ಯಾಸ್ಪದ ಮತ್ತು ತಾಂತ್ರಿಕ ನೆಪ ಎಂದು ಪೀಠ ಹೇಳಿದೆ.
ರೋಗಿಯು ತನಗೆ ಇಷ್ಟ ಬಂದಂತೆ ಈ ಇಂಜೆಕ್ಷನ್ ಪಡೆದಿಲ್ಲ, ವೈದ್ಯರ ಕಡ್ಡಾಯ ಲಿಖಿತ ಸಲಹೆಯ ಮೇರೆಗೆ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಅದನ್ನು ಪಡೆದಿದ್ದಾರೆ. ಕೀಮೋಥೆರಪಿಯ ವೆಚ್ಚ ಭರಿಸಿದ ವಿಮಾ ಕಂಪನಿಯು, ಅದರ ಮುಂದುವರೆದ ಭಾಗವಾದ ಇಂಜೆಕ್ಷನ್ ವೆಚ್ಚವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. ಅಲ್ಲದೇ, ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರನ್ನು ಇಂತಹ ತಾಂತ್ರಿಕ ಕಾರಣಗಳನ್ನು ನೀಡಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ ವಿಮಾ ಕಂಪನಿಯ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಲೋಕ ಅದಾಲತ್ ಆದೇಶಿಸಿದ ಮೊತ್ತ ಮತ್ತು ಬಡ್ಡಿಯನ್ನು 30 ದಿನಗಳೊಳಗೆ ಪಾವತಿಸಬೇಕು ಹಾಗೂ ಅರ್ಜಿದಾರರಿಗೆ ಕಾನೂನು ಹೋರಾಟಕ್ಕಾಗಿ ಆದ ವೆಚ್ಚಕ್ಕಾಗಿ 50,000 ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಪೀಠ ಹೇಳಿದೆ.
ಹಿನ್ನೆಲೆ ; ನಾಲ್ಕನೇ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಂಗಳೂರು ಮೂಲದ ಪದ್ಮನಾಭ ಶೆಟ್ಟಿ ಎಂಬವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೀಮೋಥೆರಪಿ ಚಿಕಿತ್ಸೆ ಪಡೆದಿದ್ದರು. ತದನಂತರ ವೈದ್ಯರ ಸಲಹೆಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ‘ಝೋಲಾಡೆಕ್ಸ್’ ಮತ್ತು ‘ಎಕ್ಸ್ ಗೇವಾ’ ಎಂಬ ಎರಡು ಪ್ರಮುಖ ಪೋಸ್ಟ್-ಕೀಮೋಥೆರಪಿ ಇಂಜೆಕ್ಷನ್‌ಗಳನ್ನು ಪಡೆಯುತ್ತಿದ್ದರು. ಈ ಇಂಜೆಕ್ಷನ್‌ಗಳಿಗಾಗಿ ಅವರು 2,85,470 ರೂ.ಗಳನ್ನು ಪಾವತಿಸಿದ್ದರು.
ಆದರೆ, ವಿಮಾ ಕಂಪನಿಯು, ಈ ಇಂಜೆಕ್ಷನ್‌ಗಳನ್ನು ಪಡೆಯಲು ರೋಗಿ ಆಸ್ಪತ್ರೆಯಲ್ಲಿ 24 ಗಂಟೆ ದಾಖಲಾಗುವ ಅಗತ್ಯವಿಲ್ಲ, ಇದು ಹೊರರೋಗಿ ಚಿಕಿತ್ಸೆಯಾಗಿದೆ. ಆದ್ದರಿಂದ ವಿಮಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಪರಿಹಾರ ನೀಡಲು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮಂಗಳೂರಿನ ನಡೆದ ಲೋಕ ಅದಾಲತ್ ಮೆಟ್ಟಿಲೇರಿದ್ದರು. ಲೋಕ ಅದಾಲತ್ ಪದ್ಮನಾಭ ಶೆಟ್ಟಿ ಪರವಾಗಿ ತೀರ್ಪು ನೀಡಿ, ಬಡ್ಡಿ ಸಹಿತ ಹಣ ಪಾವತಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.