Kodagu

ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ

admincoorgdaily

ಕರಿಕೆ ಗ್ರಾಮದಲ್ಲಿ ಪೋಷಣಯುಕ್ತ ಉತ್ಪನ್ನ ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ
ಮಡಿಕೇರಿ :-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯುಷ್  ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕರಿಕೆ ಗ್ರಾಮದಲ್ಲಿ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮದ ಫಲಾನುಭವಿಗಳಿಗೆ ಪೋಷಣ್ ವಾಟಿಕಗಳಲ್ಲಿ ಬೆಳೆಯುವ ಉತ್ಪನ್ನಗಳು ಹಾಗೂ ಸ್ಥಳೀಯವಾಗಿ ದೊರೆಯುವ ಋತುಮಾನಿಕ ಆಹಾರ ಪ್ರದರ್ಶನ ನಡೆಯಿತು. 
     ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ದಿನನಿತ್ಯದ ಆಹಾರದಲ್ಲಿ ಮತ್ತು ಚಿಕ್ಕ ಮಕ್ಕಳ ಪೂರಕ ಆಹಾರದಲ್ಲಿ ನಿಯಮತವಾಗಿ ಬಳಸುವಂತೆ ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.     
     ಶಿಶು ಹಾಗೂ ತಾಯಿ ಮರಣ ತಡೆಯುವುದು, ಜತೆಗೆ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾಗಬೇಕಿದೆ. ಆ ದಿಸೆಯಲ್ಲಿ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. 
      ಕರಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಾಲಚಂದ್ರ ನಾಯರ್ ಅವರು ಮಾತನಾಡಿ ಉತ್ತಮ ಆಲೋಚನೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕರ್ತವ್ಯ ನಿಷ್ಠೆ  ಅಗತ್ಯ. ಆ ನಿಟ್ಟಿನಲ್ಲಿ ಕೊರೋನಾ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಪ್ರಜ್ಞೆ ಮೆಚ್ಚುವಂತದ್ದು ಎಂದರು. 

      ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ರವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಪೆÇೀಷಣ ಮಾಸಾಚರಣೆಯ 5 ಮುಖ್ಯ ಉದ್ದೇಶಗಳ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು. ಸ್ಥಳೀಯವಾದ ಆಹಾರ ಸಾಂಪ್ರದಾಯಿಕ ಆಹಾರ ಬಳಸಲು ಕರೆ ನೀಡಿದರು. 

      ಕರಿಕೆ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಪಲ್ಲವಿ ಅವರು ಎಲ್ಲಾ ವಯೋಮಾನದವರಿಗೆ ಸಮತೋಲನ ಆಹಾರ ಮತ್ತು ವೈವಿಧ್ಯ ಆಹಾರ ಬಳಸುವ ನಿಟ್ಟಿನಲ್ಲಿ ಈ ದಿನ ವಿವಿಧ ರೀತಿಯ ಆಹಾರಗಳ ಪ್ರದರ್ಶನ ಮಾಡಿದ್ದೂ ಹಾಗೂ ಆಹಾರದ ಪಿರಮಿಡ್ ರಚನೆ ಮಾಡಿ ಅದರ ಮೂಲಕ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಲಾಗುತ್ತಿದ್ದು, ಮಹಿಳೆಯರು  ಜಾಗೃತರಾಗಿ ತಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಲು ತಿಳಿಸಿದರು.  
      ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ರವರು ಮಾತನಾಡಿ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷಣ ಮಾಸಾಚರಣೆಯಲ್ಲಿ ಪ್ರಾಮುಖ್ಯತೆ ನೀಡಿತ್ತು ಎಂದರು. 

      ಮಕ್ಕಳ ಪೋಷಕರು ಉತ್ತಮ ಪಾಲ್ಗೊಳ್ಳುವಿಕೆಯೊಂದಿಗೆ ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಅಭಿವೃದ್ಧಿಗೆ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಕೈಜೋಡಿಸುವಂತೆ ಅಂಗನವಾಡಿ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಕರೆ ನೀಡಿದರು. ವೈಯಕ್ತಿಕ ಸ್ವಚ್ಛತೆ, ಆಹಾರದಲ್ಲಿ ವೈವಿಧ್ಯತೆ ಮತ್ತು ತೂಕದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. 
       ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಅಭಿಲಾಶ್ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
       ಇತ್ತೀಚೆಗೆ ನಿವೃತ್ತರಾದ 13 ನೇ ಮೈಲು ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಂತಿ, ಕರಿಕೆ ಗ್ರಾಮ ಪಂಚಾಯಿತಿಗೆ ಸೇರಿದ ಎಲ್ಲಾ ಗ್ರಾಮದ ಫಲಾನುಭವಿಗಳು ಗರ್ಭಿಣಿ ಬಾಣಂತಿಯರು ಭಾಗಮಂಡಲ ವೃತ್ತದ 30 ಗ್ರಾಮಕ್ಕೆ ಸಂಬಂಧಿಸಿದ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆಯರು ಇತರರು ಪಾಲ್ಗೊಂಡಿದ್ದರು.

ಮೂರ್ನಾಡು ಗ್ರಾಮದಲ್ಲಿ ಪೋಷಣ್ ಮಾಸಾಚರಣೆ: 

ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಹಾಗೂ ಇಲಾಖಾ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ನಡೆಯಿತು. 

 ಮೂರ್ನಾಡು ವೃತ್ತದ ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ಪೋಷಣೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್ ಅವರು ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ, ಸಮರ್ಪಕ ಪೆÇೀಷಣೆ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ದೊರೆಯುವ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

 ಮೂರ್ನಾಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಐಕೊಳ-1 ಅಂಗನವಾಡಿ ಕಾರ್ಯಕರ್ತೆ ಉಮಾವತಿ ಅವರು ಪೌಷ್ಟಿಕ ಆಹಾರ, ಮಗುವಿನ ಪ್ರಾರಂಭಿಕ ಹಂತದಲ್ಲಿ ಪೋಷಣೆ, ರಕ್ಷಣೆ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು.

 ಹುಕಾಡು ಪೈಸಾರಿ ಅಂಗನವಾಡಿ ಕಾರ್ಯಕರ್ತೆ ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿಯನ್ನು ವಿವರಿಸಿ, ಅರ್ಹ ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ನಡೆಸಿದರು. ಶಾಸ್ತ್ರಿನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರು ಪ್ರೋಟೀನ್‍ಯುಕ್ತ ಆಹಾರಗಳ ಮಹತ್ವದ ಕುರಿತು ಮಾಹಿತಿ ನೀಡಿದರು.

 ಕಗ್ಗೊಡ್ಲು ಅಂಗನವಾಡಿ ಕಾರ್ಯಕರ್ತೆ ವೀಣಾ ಕುಮಾರಿ ಅವರು ಭಾಗ್ಯಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ನೀಡಿದರು. ಗಾಂಧಿನಗರ ಅಂಗನವಾಡಿ ಕಾರ್ಯಕರ್ತೆ ಚೈತ್ರಾ ಅವರು ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳು ಹಾಗೂ ಆಹಾರ ಮೆನು ಕುರಿತು ವಿವರಿಸಿದರು. ಕಾಂತೂರು ಅಂಗನವಾಡಿ ಕಾರ್ಯಕರ್ತೆ ಗೃಹಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ನೀಡಿದರು.

 ಕಾರ್ಯಕ್ರಮದ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕಾರ್ಯಕರ್ತೆ ಕುಸುಮ ಅವರು ಕಾರ್ಯಕ್ರಮದ ಆಯೋಜನೆ ಹಾಗೂ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆಯನ್ನು ನಡೆಸಿದರು.
 ಎಂ.ಬಾಡಗ-2 ಅಂಗನವಾಡಿ ಕಾರ್ಯಕರ್ತೆ ಭವ್ಯಾ ಅವರು ಸ್ವಾಗತಿಸಿದರು. ಅರಗಲು ಮೊಟ್ಟೆ ಅಂಗನವಾಡಿ ಕಾರ್ಯಕರ್ತೆ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಬಿಳಿಗೇರಿ ಅಂಗನವಾಡಿ ಕಾರ್ಯಕರ್ತೆ ಕನ್ನಿಕಾ ವಂದನಾರ್ಪಣೆ ಸಲ್ಲಿಸಿದರು.

 ಕಾರ್ಯಕ್ರಮದಲ್ಲಿ ಬಡಗ ಅಂಗನವಾಡಿ ಕಾರ್ಯಕರ್ತೆ ಜಯಂತಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಇತರ ಫಲಾನುಭವಿಗಳು ಉಪಸ್ಥಿತರಿದ್ದರು.