Kodagu

ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ: ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ - ಡಾ. ಶಿಲ್ಪ

admincoorgdaily

ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ: ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ - ಡಾ. ಶಿಲ್ಪ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ವಲಯದ ವತಿಯಿಂದ ಮೂರ್ನಾಡಿನ ಕಿಗ್ಗಾಲು ಸಮುದಾಯ ಭವನದಲ್ಲಿ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಇತ್ತೀಚಿಗೆ ಯಶಸ್ವಿಯಾಗಿ ನಡೆಯಿತು.

   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಶುವೈದ್ಯರಾದ ಡಾ. ಶಿಲ್ಪ ಅವರು ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳ ತಳಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಎಚ್‌ಎಫ್  ಹಾಗೂ ಜರ್ಸಿ ಮುಂತಾದ ಮಿಶ್ರತಳಿಗಳ ಆಯ್ಕೆ, ಉತ್ತಮ ಹಾಲು ಉತ್ಪಾದನೆಗೆ ಜಾನುವಾರುಗಳಿಗೆ ಗುಣಮಟ್ಟದ ಹಸಿರು ಮೇವು ಮತ್ತು ಅಜೋಲಾ ಮುಂತಾದ ಜಲಸಸ್ಯಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಜಾನುವಾರುಗಳಿಗೆ ವಿಮೆ ಮಾಡಿಸುವುದು ಹಾಗೂ ಕರುಗಳ ಸಮರ್ಪಕ ಪಾಲನೆ ಅತ್ಯಂತ ಅಗತ್ಯ ಎಂದು ಕಿವಿಮಾತು ಹೇಳಿದರು.

   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಜಪೇಟೆ ತಾಲೂಕಿನ ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಹೈನುಗಾರಿಕೆಗೆ ಆರ್ಥಿಕ ನೆರವು ದೊರೆಯುತ್ತಿದ್ದು, ರೈತ ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ಕರೆ ನೀಡಿದರು.

  ಇದೇ ವೇಳೆ ವರಲಕ್ಷ್ಮಿ ಅವರು ಹೈನುಗಾರಿಕೆಯಿಂದ ದೊರೆಯುವ ಆರ್ಥಿಕ ಲಾಭದ ಕುರಿತು ವಿವರಿಸುತ್ತಾ, ಉಪ ಕಸುಬುಗಳಾದ ಆಡು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆಯ ಮಹತ್ವದ ಕುರಿತೂ ಬೆಳಕು ಚೆಲ್ಲಿದರು.

    ಕಾರ್ಯಕ್ರಮದಲ್ಲಿ ವಲಯದ ಸೇವಾಪ್ರತಿನಿಧಿ ದಿವ್ಯ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕರಾದ ಮಧು ರಾಜಣ್ಣ, ವಿಪ್ಪನ್, ವರಲಕ್ಷಿ÷್ಮ, ಪಾರ್ವತಿ, ಕಾರ್ಯಪ್ಪ, ಮೇದಪ್ಪ ಹಾಗೂ ಅಪ್ಪಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.