Kodagu

ತೋಟಗಾರಿಕಾ ಬೆಳೆಗಳ ಅವಕಾಶ ಮತ್ತು ಬೇಸಾಯ ತಾಂತ್ರಿಕತೆಗಳ ಕುರಿತು ರೈತ ಕ್ಷೇತ್ರ ಪಾಠಶಾಲೆ

admincoorgdaily

ತೋಟಗಾರಿಕಾ ಬೆಳೆಗಳ ಅವಕಾಶ ಮತ್ತು ಬೇಸಾಯ ತಾಂತ್ರಿಕತೆಗಳ ಕುರಿತು ರೈತ ಕ್ಷೇತ್ರ ಪಾಠಶಾಲೆ
ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವಿರಾಜಪೇಟೆ ತಾಲೂಕು, ಪೊನ್ನಂಪೇಟೆ ವಲಯದ ವತಿಯಿಂದ ಶ್ರೀಮಂಗಲ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ತೋಟಗಾರಿಕಾ ಬೆಳೆಗಳ ಅವಕಾಶ ಮತ್ತು ಬೇಸಾಯ ತಾಂತ್ರಿಕತೆಗಳ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.

   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡಾ. ಕೆಂಚ ರೆಡ್ಡಿ ಅವರು ಮಾತನಾಡಿ, ತೋಟಗಾರಿಕೆ ಎಂದರೆ ಕೇವಲ ಭತ್ತ ಮತ್ತು ರಾಗಿ ಬೆಳೆಗಳಿಗೆ ಸೀಮಿತವಾಗಿರದೆ ತರಕಾರಿ, ಹಣ್ಣು, ಹೂವು ಹಾಗೂ ಮಸಾಲೆ ಬೆಳೆಗಳಲ್ಲಿಯೂ ಉತ್ತಮ ಆದಾಯ ಗಳಿಸುವ ಅವಕಾಶಗಳಿವೆ ಎಂದು ತಿಳಿಸಿದರು.

   ರೈತರು ಆರಂಭದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಕೃಷಿ ಕೈಗೊಳ್ಳುವ ಬದಲು, ಮೊದಲು ಅರ್ಧ ಎಕರೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ತರಕಾರಿ ಬೆಳೆಗಳನ್ನು ಬೆಳೆದು ಅನುಭವ ಪಡೆಯಬೇಕು. ನಂತರ ಕೃಷಿಯನ್ನು ಹಂತ ಹಂತವಾಗಿ ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

  ಇದೇ ಸಂದರ್ಭದಲ್ಲಿ ಜೇನು ಕೃಷಿಯ ಮಹತ್ವವನ್ನು ವಿವರಿಸಿದ ಅವರು, ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಗಳಿಸಲು ಜೇನು ಕೃಷಿ ಸಹಕಾರಿಯಾಗಿದೆ. ತೋಟಗಾರಿಕಾ ಬೆಳೆಗಳೊಂದಿಗೆ ಜೇನು ಕೃಷಿಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ರೈತರು ಆರಂಭದಲ್ಲಿ ಎರಡು ಜೇನು ಪೆಟ್ಟಿಗೆಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಜೇನು ಕೃಷಿ ಪ್ರಾರಂಭಿಸಿ, ಅನುಭವ ಮತ್ತು ಬೇಡಿಕೆಗೆ ಅನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದು ಎಂದು ಮಾಹಿತಿ ನೀಡಿದರು.

   ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಮೀನಾ, ಶೌರ್ಯ ತಂಡದ ಪ್ರತಿನಿಧಿಗಳಾದ ರಾಜೇಶ್ ಮತ್ತು ಹರಿಕೃಷ್ಣ, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾಪ್ರತಿನಿಧಿ ಸರಳ, ಸ್ಥಳೀಯ ರೈತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.