Kodagu

ರೈತರಿಗೆ ಅನುಕೂಲಕರ ಕೃಷಿ ಯಂತ್ರೋಪಕರಣ ಅಗತ್ಯ: ಪೂಜಾ ಸಜೇಶ್ ಅಭಿಪ್ರಾಯ

admincoorgdaily

ರೈತರಿಗೆ ಅನುಕೂಲಕರ ಕೃಷಿ ಯಂತ್ರೋಪಕರಣ ಅಗತ್ಯ: ಪೂಜಾ ಸಜೇಶ್ ಅಭಿಪ್ರಾಯ
ವಿರಾಜಪೇಟೆ:
ಇತ್ತೀಚಿನ ದಿನಗಳಲ್ಲಿ ಕೃಷಿಯು ಹೆಚ್ಚು ಲಾಭದಾಯಕವಾಗಿ ಉಳಿದಿಲ್ಲ.  ರೈತರಿಗೆ ಕೃಷಿಯು ಹೆಚ್ಚು ಲಾಭವಾಗಬೇಕಾದರೆ ದೊಡ್ಡ ದೊಡ್ಡ ಕಂಪನಿಗಳು ಕೃಷಿಯಂತ್ರೋಪಕರಣಗಳ ಅಭಿವೃದ್ಧಿಯತ್ತ ಮನಸು ಮಾಡಿ ರೈತರಿಗೆ ಉಪಯೋಗವಾಗುವ ಯಂತ್ರೋಪಕರಣಗಳನ್ನು ಉತ್ಪಾದಿಸಬೇಕೆಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸಜೇಶ್ ಅಭಿಪ್ರಾಯ ವ್ಯಕ್ತಪಡಿಸಿದರು .

ಪೊನ್ನಂಪೇಟೆ  ಅರಣ್ಯ ಮಹಾವಿದ್ಯಾಲಯ   ಕಾರ್ಯಾನುಭವ ಶಿಬಿರದ, ಕೃಷಿ  ಇಲಾಖೆ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ    ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ ಭವನದಲ್ಲಿ ಬುಧವಾರ  ರೈತರಿಗೆ ಆಯೋಜಿಸಲಾಗಿದ್ದ  ಬೆಳೆ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು ಎರೆಯುದರ‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯವು ಉನ್ನತ ಶಿಕ್ಷಣವನ್ನು ಪಡೆದು ವಿದೇಶಗಳಲ್ಲಿ ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿ ಕಂಪನಿಗಳಲ್ಲಿ ಕೆಲಸವನ್ನು ಹರಸಿ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಮಾಡುವವರ ಪ್ರಮಾಣ ಇಳಿಕೆಯಾಗಿದೆ. ರೈತರೊಂದಿಗೆ ದೊಡ್ಡ ದೊಡ್ಡ ಕಂಪನಿಗಳು ಕೈಜೋಡಿಸಿ ಕೃಷಿ ಚಟುವಟಿಕೆಗೆ ಪೂರಕವಾಗುವ ಯಂತ್ರೋಪಕರಣಗಳನ್ನು ಕಡಿಮೆ ಹಣದಲ್ಲಿ ಒದಗಿಸಿಕೊಟ್ಟರೆ ಕೃಷಿಯಲ್ಲಿ ಅಭಿವೃದ್ಧಿಯು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಬಳಕೆಗೆ ಬಂದಾಗ ಕೃಷಿಯು ಹೆಚ್ಚು ಲಾಭದಾಯಕವಾಗುತ್ತ ಹೋಗುತ್ತದೆ ಅಷ್ಟೇ ಅಲ್ಲದೆ ದೇಶದ ಅಭಿವೃದ್ಧಿಗೆ  ಕೃಷಿಯ ಮೂಲಕ ದೊಡ್ಡ ಪ್ರಮಾಣದ ಸಹಾಯ ದೊರೆಯುತ್ತದೆ.  ಈ ರೀತಿಯಾದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ತಜ್ಞರ ಮೂಲಕ ರೈತರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವುದರಿಂದ ರೈತರಿಗೂ ಸಹಕಾರಿಯಾಗುವುದರೊಂದಿಗೆ ಯುವ ಸಮುದಾಯಕ್ಕೆ ಕೃಷಿಯ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ.ಕೃಷಿಯ ಬಗ್ಗೆ  ಮನಸ್ಥಿತಿ ಬದಲಾಗಬೇಕು ಹಾಗೂ  ಸಮರ್ಪಕಾ ಮಾಹಿತಿಯೊಂದಿಗೆ ಕೃಷಿಗೆ ತೊಡಗಿದರೆ ಉತ್ತಮ ಬದುಕು ಕಟ್ಟಿಕೊಳ್ಳ ಬಹುದು ಎಂದರು.


ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಪ್ರಾಧ್ಯಾಪಕರ ಡಾ. ಜಡೇಗೌಡ, ಎಂ. 
ಭತ್ತದ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಎಂಬ ವಿಷಯದ  ಬಗ್ಗೆ  ವಿಷಯ ಮಂಡನೆ ಮಾಡಿದರು.
 ಕೆ.ವಿ.ಕೆ. ಗೋಣಿಕೊಪ್ಪದ ವಿಷಯ ತಜ್ಞ  ಡಾ.  ಸಿ ಪ್ರಭಾಕರ್. ತೋಟಗಾರಿಕಾ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾಳು ಮೆಣಸು ಹಾಗೂ ಕಾಫಿ ಬೆಳೆಯ ಕೀಟ ಮತ್ತು ರೋಗ ನಿರ್ವಹಣೆ ವಿಷಯದ ಬಗ್ಗೆ ಐ.ಸಿ.ಎ.ಆರ್, ಕೆ.ವಿ.ಕೆ, ಗೋಣಿಕೊಪ್ಪ ವಿಷಯ ತಜ್ಞರಾದ ಡಾ. ವೀರೇಂದ್ರಕುಮಾರ್, ಕೆ. ವಿ.   ಮಾಹಿತಿ ನೀಡಿದರು. 
ಡಾ. ಜಿ.ಎ. ರಾಜಣ್ಣ. ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಬೆಳೆಗಳ ಬಿ.ಸಿ.ಎ.ಆರ್. ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಕೊಡಗು ಇವರು ಕಾಳು ಮೆಣಸು ಮತ್ತು ಏಲಕ್ಕಿಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕೃಷಿಯ ಮಾಹಿತಿ ನೀಡಿದರು.ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ 
ಸಹಾಯಕ ಪ್ರಾಧ್ಯಪಕರಾದ ಡಾ.ಎಂ. ಮಂಜುನಾಥ ಕಾರ್ಬನ್ ಕ್ರೆಡಿಟ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಮಡಿಕೇರಿಯ ಉಪ ಕೃಷಿ ನಿರ್ದೇಶಕರಾದ
ಡಾ. ಡಿ. ಎಸ್. ಸೋಮಶೇಖರ   ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ಕೃಷಿ ಚಟುವಟಿಕೆಯ ಅನುಭವ ಬಹಳ ಮುಖ್ಯವಾಗಿದ್ದು ಕೃಷಿ ಪ್ರಾಥಮಿಕ ಆದಾಯದ ಮೂಲವಾಗಿದೆ.  ಕೈಗಾರಿಕೆಗಳು ಎಷ್ಟೇ ಅಭಿವೃದ್ಧಿಯನ್ನು ಕಂಡರೂ ಆಹಾರ ಬೆಳೆಗಳ  ಉತ್ಪಾದನೆ ನಡೆಯದಿದ್ದರೆ ಬದುಕಲು ಸಾಧ್ಯವಿಲ್ಲ. ಕೃಷಿ ಭೂಮಿಗಳನ್ನು ಲೇಔಟ್ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವುದನ್ನು ಕಡಿಮೆ ಮಾಡಿ ಆಹಾರ ಬೆಳೆಗಳನ್ನು ಬೆಳೆಯದಿದ್ದರೆ  ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರದ ಅಭಾವ ಎದುರಾಗುತ್ತದೆ ಎಂದರು .

ಅರಣ್ಯ ಮಹಾವಿದ್ಯಾಲಯದ  ಪ್ರಾಧ್ಯಾಪಕರಾದ ಡಾ. ಆರ್ ಎನ್ ಕೆಂಚಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯ  ಪ್ರಭಾರ ಡೀನ್ ಹಾಗೂ ಪ್ರಾಧ್ಯಾಪಕರಾದ ಡಾ.  ಪಿ .ಎಸ್. ಶಿವಕುಮಾರ್ ಬಹಳ ಹಿಂದಿನ ಕಾಲದಿಂದಲೂ ಕೃಷಿ ಕಾರ್ಯ ನಡೆದುಕೊಂಡು ಬರುತ್ತಿದ್ದರು ರೋಗ ಇನ್ನಿತರ ಸಮಸ್ಯೆಯಿಂದಾಗಿ ಬದಲಾದ ಕಾಲಘಟ್ಟದಲ್ಲಿ ಕೃಷಿಯ ಪ್ರಮಾಣ ಕಡಿಮೆಯಾಗುತ್ತಿದೆ . ಕೃಷಿ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಕೃಷಿಯನ್ನು ಸಮರ್ಪಕವಾಗಿ ಅರ್ಥೈಸಿ  ಕೃಷಿ ಚಟುವಟಿಕೆಗೆ ಇಳಿಯಬೇಕು. ರೈತರು ಆದಷ್ಟು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಡೆಯಿಂದ ಕಾಲಕಾಲಕ್ಕೆ ಸರಿಯಾದ ಮಾಹಿತಿಯನ್ನು ಪಡೆದು ಸಮರ್ಪಕವಾಗಿ ಕೃಷಿ ಚಟುವಟಿಕೆಗಳನ್ನು ಮಾಡಿದರೆ ಸ್ವಾವಲಂಬಿಯಾದ ಜೀವನವನ್ನು ನಡೆಸುವುದರೊಂದಿಗೆ ಉತ್ತಮ ಆದಾಯವನ್ನು ಗಳಿಸಿ ಲಾಭದಾಯಕ ಜೀವನ ನಡೆಸಬಹುದೆಂದರು.


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ  ಅರಣ್ಯ ಮಹಾವಿದ್ಯಾಲಯದ  ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀ ಬಳಗಾನೂರಮಠ , ಕೆ.ಎಂ. ನಾಣಯ್ಯ, ಡಾ.ನವೀನ್ , ಡಾ ನಿಂಗರಾಜ್ ದಳವಾಯಿ , ಡಾ. ಸುಮನ ಉಪಸ್ಥಿತರಿದ್ದರು. 

ವಿಚಾರ ಸಂಕಿರಣದಲ್ಲಿ ಹೆಗ್ಗಳ , ಬೇಟೋಳಿ ಗ್ರಾಮದ ರೈತರು, ಶಾಲಾ ವಿದ್ಯಾರ್ಥಿಗಳು,  ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.