CRIME

ತಂದೆ ಪೊಲೀಸ್, ಮಗ ಗಾಂಜಾ ಬೆಳೆಗಾರ,ತೋಟದಲ್ಲಿ 8.2 ಅಡಿ ಗಾಂಜಾ ಗಿಡ ಪತ್ತೆ, ಪುತ್ರ ಅರೆಸ್ಟ್!

admincoorgdaily

ಸಾಂದರ್ಭಿಕ ಚಿತ್ರ
ತುಮಕೂರು: ಡ್ರಗ್ಸ್​​ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರ ಅದರಲ್ಲೂ ಪೊಲೀಸ್​​ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಮಾದಕ ವಸ್ತು ಜಾಲದ ಮೇಲೆ ಹದ್ದಿನ ಕಣ್ಣಿಟ್ಟು ಪೆಡ್ಲರ್​​ಗಳ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದೆ. ಆದರೆ ದುರ್ದೈವ ಎಂಬಂತೆ ಇಂತಹುದ್ದೇ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್​​ ಸಿಬ್ಬಂದಿಯ ಪುತ್ರನೇ ಗಾಂಜಾ ಕೃಷಿ ಮಾಡಿರೋದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸಪ್ಪನ ಪುತ್ರ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದು ಕಂಡು ಸ್ಥಳೀಯರಿಗೂ ಶಾಕ್​​ ಆಗಿದೆ.

950 ಗ್ರಾಂಗಳಷ್ಟು ತೂಕದ ಗಾಂಜಾ ಗಿಡ ವಶಕ್ಕೆ
ಹೌದು, ಹಿತೇಂದ್ರ (28) ಬಂಧಿತ ಆರೋಪಿಯಾಗಿದ್ದು, ಈತನ ತಂದೆ ತುಮಕೂರಿನ ಪೊಲೀಸ್ ಠಾಣೆಯೊಂದರ ಸಿಬ್ಬಂದಿ. ಅತ್ತ ಮಾದಕ ವಸ್ತುವಿನಿಂದ ದೂರು ಇರುವಂತೆ ತಂದೆಯಿಂದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೆ, ಇತ್ತ ಅವರ ಪುತ್ರ ಮಾತ್ರ ಮಾಡಬಾರದ ಕೆಲಸ ಮಾಡಿರೋದು ಪೊಲೀಸರ ದಾಳಿ ವೇಳೆ ಬಯಲಾಗಿದೆ. ಖಚಿತ ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಚೇಳೂರು ಪೊಲೀಸರು, ತೋಟದಲ್ಲಿ ಗೊಬ್ಬರ ಹಾಕಿ ಸೊಗಸಾಗಿ ಬೆಳೆಸಿದ್ದ 8.2 ಅಡಿ ಎತ್ತರ ಬೆಳೆದಿದ್ದ ಗಾಂಜಾ ಗಿಡ ಪತ್ತೆ ಮಾಡಿದ್ದಾರೆ. ಬರೋಬ್ಬರಿ 950 ಗ್ರಾಂಗಳಷ್ಟು ತೂಕವಿದ್ದ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ.