Kodagu

ತಿತಿಮತಿಯಲ್ಲಿ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ

admincoorgdaily

ತಿತಿಮತಿಯಲ್ಲಿ  ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮ
ಮಡಿಕೇರಿ :-   ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಆರ್ಥಿಕ ವಂಚನೆ  ಮತ್ತು ಸೈಬರ್ ಬೆದರಿಕೆಗಳು  ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ದಿನನಿತ್ಯ  ವಂಚನೆ ಪ್ರಕರಣಗಳು ಅಧಿಕವಾಗಲು ನಾವು ಬಳಸುವ ಸಾಮಾಜಿಕ ಜಾಲತಾಣಗಳೇ ಕಾರಣವಾದರೂ 
ನಮ್ಮ ಸಣ್ಣ ಅಸಡ್ಡೆ ಅಥವಾ ಅರಿವಿನ ಕೊರತೆಯಿಂದಾಗಿ ಕಷ್ಟಪಟ್ಟು ದುಡಿದ ಹಣ ಕೈತಪ್ಪಿ ಹೋಗಬಹುದು.
ಈ ರೀತಿಯ ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಲು ಅತ್ಯಂತ ಎಚ್ಚರ ವಹಿಸಬೇಕಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕಾಳೇಗೌಡ  ಸಲಹೆ ನೀಡಿದರು.
ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿರುವ  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ 
ಬಜಾಜ್ ಫೈನಾನ್ಸ್ 
ಲಿಮಿಟೆಡ್ (BFL) ಸಂಸ್ಥೆ ಹಾಗೂ ಲ್ಯಾಂಪ್ ಸೊಸೈಟಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ 
ಕೊಡಗು ಪೊಲೀಸ್ ಇಲಾಖೆ ವತಿಯಿಂದಲೂ ಜಿಲ್ಲೆಯಾದ್ಯಂತ ಅಪರಾಧ ತಡೆ ಜಾಗೃತಿ  ಕಾರ್ಯಕ್ರಮಗಳನ್ನು  ಮಾಡಲಾಗುತ್ತಿದ್ದು ಸಾರ್ವಜನಿಕರು ಜಾಗೃತರಾಗಬೇಕಾಗಿದೆ ಎಂದು ಹೇಳಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳ ಮೂಲಕ ಆಮಿಷಗಳನ್ನು ತೋರಿಸಿ ಓಟಿಪಿ ಪಿನ್ ಸಂಖ್ಯೆ ಮೂಲಕ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಇಂಥ ಆಮಿಷಗಳಿಗೆ ಬಲಿಯಾಗದೆ ಗೌಪ್ಯ ಮಾಹಿತಿಯನ್ನ ಯಾರಿಗೂ ಹಂಚಿಕೊಳ್ಳದೆ ಎಚ್ಚರ ವಹಿಸಬೇಕು. 
ಯಾವುದೇ ಇಲಾಖೆಗಳು, ಬ್ಯಾಂಕುಗಳು, ಅಧಿಕಾರಿಗಳ ಹೆಸರಿನಲ್ಲಿ  ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ನಕಲಿ ಲಿಂಕುಗಳನ್ನು ಕಳಿಸಿ  ಓಟಿಪಿ ಪಿನ್ಗಳನ್ನ ಪಡೆಯಲು ಪ್ರಯತ್ನಿಸುತ್ತಾರೆ. ಅಂತಹ ವಂಚನೆಗಳಿಂದ ಜಾಗ್ರತರಾಗಿ ಯಾವುದೇ ವಹಿವಾಟುಗಳಿದ್ದರೆ ನೇರವಾಗಿ ಬ್ಯಾಂಕುಗಳಿಗೆ ತೆರಳಿ ವ್ಯವಹಾರ ಮಾಡಿ 
ಸುತ್ತಮುತ್ತಲ ಗ್ರಾಮ ವ್ಯಾಪ್ತಿಗಳಲ್ಲಿ ಹೊರಗಿನಿಂದ ಬರುವವರ ಬಗ್ಗೆ ನಿಗಾ ವಹಿಸುವುದರ ಮೂಲಕ ಅಪರಾಧ ಪ್ರಕರಣಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ 
ತುರ್ತು ಸಂದರ್ಭದಲ್ಲಿ 112 ಸಂಖ್ಯೆ ಹಾಗೂ ಸೈಬರ್ ಅಪರಾಧ ಸಹಾಯವಾಣಿ, 1930 ರ ಮೂಲಕ ಸೈಬರ್ ವಂಚನೆಯ ಬಗ್ಗೆ ತ್ವರಿತವಾಗಿ ವರದಿ ಮಾಡುವ ಮೂಲಕ ಜಾಗೃತರಾಗಬೇಕೆಂದು ಮನವಿ ಮಾಡಿದರು. 

ಬಜಾಜ್ ಫೈನಾನ್ಸ್ ಸಂಸ್ಥೆಯ ವಲಯ ಮೇಲ್ವಿಚಾರಕ
ಅಶೋಕ್ ಕುಮಾರ್ ಡಿ, ಮಾತನಾಡಿ ಭಾರತೀಯ ರಿಸರ್ವ್ ಬ್ಯಾಂಕಿನ ದೃಷ್ಟಿಕೋನಕ್ಕೆ ಅನುಗುಣವಾಗಿ, ಬಜಾಜ್ ಫೈನಾನ್ಸ್  ಲಿಮಿಟೆಡ್ (BFL) ರಾಷ್ಟ್ರವ್ಯಾಪಿ ಹಣಕಾಸು ಸಾಕ್ಷರತಾ ಉಪಕ್ರಮವಾದ ಅರ್ಥಸೂತ್ರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಆರ್ಥಿಕ ಜಾಗೃತಿ ಸಾಕ್ಷರತಾ ಸಂವಾದ ಅಭಿಯಾನದ ಮೂಲಕ, ನಾಗರಿಕರನ್ನು ಅಗತ್ಯ ಆರ್ಥಿಕ ಜ್ಞಾನದಿಂದ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ, 
ವೈಯಕ್ತಿಕ ಬಜೆಟ್, ಉಳಿತಾಯ ಮತ್ತು ಹಣಕಾಸು ಯೋಜನೆ, ವಿಮಾ ಜಾಗೃತಿ, ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ಪಾವತಿಗಳು, ಸೈಬರ್ ಸುರಕ್ಷತೆ ಮತ್ತು ವಂಚನೆ ತಡೆಗಟ್ಟುವಿಕೆ ಸೇರಿದಂತೆ ಆರ್ಥಿಕ ಯೋಗಕ್ಷೇಮದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.ಇದು ಅವರಿಗೆ ತಿಳುವಳಿಕೆಯುಳ್ಳ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆರ್ಥಿಕ ವಂಚನೆ ಮತ್ತು ಸೈಬರ್ ಬೆದರಿಕೆಗಳಿಂದ  ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಲಹೆ ಮಾರ್ಗದರ್ಶಕಗಳನ್ನು ನೀಡಲಾಗುತ್ತಿದೆ. ಕಳೆದ ಒಂದು ವರ್ಷಗಳಿಂದ ದೇಶದ ನಾನಾ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಸಾಕ್ಷರತೆಯ ಮೂಲಕ 
ಸೈಬರ್ ವಂಚನೆಗಳಿಂದ ದೂರವಾಗಿ  ಉತ್ತಮ ವ್ಯವಹಾರಗಳನ್ನು ಮಾಡುವುದರ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದರು. 
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಂಕಜ ಮಾತನಾಡಿ 
ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಬ್ಯಾಂಕ್ ಹಾಗೂ ಇತರ ವ್ಯವಹಾರಗಳಲ್ಲಿ ಸರಿಯಾದ ಮಾಹಿತಿ ಇಲ್ಲದೆ ಮೋಸ ವಂಚನೆಗೊಳಗಾಗುತ್ತಿದ್ದಾರೆ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದಲೂ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. 
ಬುಡಕಟ್ಟು ಕೃಷಿಕರ ಸಂಘದ ಮುಖಂಡ ಸಿದ್ದಪ್ಪ ಮಾತನಾಡಿ ಕಾಡಂಚಿನ ಜನರಿಗೆ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಪೋಲಿಸ್ ಇಲಾಖೆ ಹಾಗು ಬಜಾಜ್ ಸಂಸ್ಥೆ ಜಾಗೃತಿ ಮೂಡಿಸುತ್ತಿರುವುದು  ಗ್ರಾಮೀಣದ ಜನರಿಗೆ
ಉಪಯುಕ್ತವಾಗಿದೆ ಇಂಥ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನಡೆಯಲಿ ಎಂದು ಹೇಳಿದರು. 
ತಿತಿಮತಿ ಸುತ್ತಮುತ್ತಲ ಹಾಡಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ  ಗಿರಿಜನ ಲ್ಯಾಂಪ್ ಸೊಸೈಟಿ ಅಧ್ಯಕ್ಷರ  ಮಣಿಕುಂನ್ಯಾ,  ಉಪಾಧ್ಯಕ್ಷೆ ಪುಷ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೊನ್ನು, 
ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪಿಆರ್ ಪಂಕಜ,  
ಅಕ್ರಮ ಸಕ್ರಮ ಸಾಮಿತಿ ಸದಸ್ಯ ಸುಬ್ರಮಣಿ, 
ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಟಿ ಸಿ ರಾಮು
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.