Kodagu

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ : ಜಾನಪದ ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸುವುದು ಅಗತ್ಯ : ಶಾಸಕ ಎ.ಎಸ್. ಪೊನ್ನಣ್ಣ

admincoorgdaily

ಮಡಿಕೇರಿ: ಮಡಿಕೇರಿ ದಸರಾ ಅಂಗವಾಗಿ ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ವತಿಯಿಂದ 6ನೇ ವರ್ಷದ ಜಾನಪದ ದಸರಾ ಸಂಭ್ರಮದಿಂದ ಭಾನುವಾರ ನಡೆಯಿತು.

       ನಗರದ ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊಂಡ ಕಲಾ ಜಾಥಾಕ್ಕೆ ಗಣ್ಯರು ಚಾಲನೆ ನೀಡಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕರಡಿ ಮಜಲು, ರಂಗ ಕುಣಿತ, ಜಾನಪದ ಜಾಗೃತಿ ನಾಟಕ ಹಾಗೂ ಆದಿವಾಸಿ ನೃತ್ಯ ಪ್ರದರ್ಶನಗಳು ಜಾಥಾದ ಪ್ರಮುಖ ಆಕರ್ಷಣೆಯಾಗಿದ್ದವು.

       ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು, ಕನ್ನಡ ಭಾಷೆ, ಸಾಹಿತ್ಯ ಹಾಗೂ ನಾಡಿನ ಜಾನಪದ ಕಲೆಗೆ ಬೆಳಕು ನೀಡುವ ಕಾರ್ಯವನ್ನು ಜಾನಪದ ಪರಿಷತ್ತು ಮಾಡುತ್ತಿದೆ ಎಂದರು.

     ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಮತರತು ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

       ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಜನರು ತಮ್ಮದೇ ಆದ ಆಚರಣೆ, ಸಂಸ್ಕೃತಿ ಹಾಗೂ ಕಲೆಗಳನ್ನು ಪ್ರದರ್ಶಿಸಲು ಜಾನಪದ ದಸರಾ ಉತ್ತಮ ವೇದಿಕೆಯಾಗಿದೆ. ಜಾನಪದವನ್ನು ಹತ್ತಿರದಿಂದ ಅರಿತುಕೊಂಡಾಗ ಜಾನಪದ ಕಲಾವಿದರ ಬದುಕು ಹಾಗೂ ಅವರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎ.ಎಸ್.ಪೊನ್ನಣ್ಣ ‌ ಅವರು ನುಡಿದರು.

    ಕನ್ನಡ ಜಾನಪದ ಸಾಹಿತ್ಯ ಉಳಿಯಬೇಕಾದರೆ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ಮುಖ್ಯ. ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

      ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಮಾತನಾಡಿ, ಕೊಡಗು ಜಿಲ್ಲೆ ತನ್ನದೇ ಆದ ಸಾಂಸ್ಕೃತಿಕ ವೈಭವವನ್ನು ಹೊಂದಿರುವ ವಿಶೇಷ ಜಿಲ್ಲೆಯಾಗಿದೆ. ಸಂಸ್ಕೃತಿ, ಸಾಹಿತ್ಯ ಹಾಗೂ ಜಾನಪದ ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿರುವುದು ಸಂತಸದ ವಿಚಾರ. ಬಹುಸಂಸ್ಕೃತಿ, ಬಹುಪರಂಪರೆ ಹಾಗೂ ವೈವಿಧ್ಯತೆಯನ್ನು ಒಳಗೊಂಡಿರುವ ಕೊಡಗಿನಲ್ಲಿ ನಾಡಹಬ್ಬ ದಸರಾ ಮೂಲಕವೂ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದು ಎಂದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಜಾನಪದ ಕಲೆ, ಹಾಡು ಹಾಗೂ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

       ಜಾನಪದ ಕಲಾವಿದರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ಅವರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವುದು ಅಗತ್ಯ. ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

       ಜಾನಪದ ಪರಂಪರೆಯಲ್ಲಿ ಪ್ರೀತಿ, ಗೌರವ, ವಾತ್ಸಲ್ಯ ಹಾಗೂ ಮಾನವೀಯ ಭಾವನೆಗಳಿಗೆ ವಿಶೇಷ ಸ್ಥಾನವಿದೆ. ಪ್ರೀತಿಯ ಲೋಕದಲ್ಲಿ ಜಾತಿ-ಮತದ ಭೇದಭಾವಗಳಿಗೆ ಅವಕಾಶವಿಲ್ಲ. ಹೃದಯಗಳನ್ನು ಬೆಸೆಯುವುದು ಹಾಗೂ ಪ್ರೀತಿಯ ಮೂಲಕ ನಾಡನ್ನು ಅಪ್ಪಿಕೊಳ್ಳುವುದು ಜಾನಪದ ಸಂಸ್ಕೃತಿಯ ಮೂಲ ಸ್ವಭಾವವಾಗಿದೆ ಎಂದು ವಿವರಿಸಿದರು.

      ಜಾನಪದ ಹಾಡುಗಳು ನಿರ್ದಿಷ್ಟ ನಿಯಮಗಳಿಗೆ ಸೀಮಿತವಾಗದೆ, ಸಂದರ್ಭಕ್ಕೆ ತಕ್ಕಂತೆ ಹೃದಯದಿಂದ ಹೊರಹೊಮ್ಮುವ ಭಾವನೆಗಳ ಅಭಿವ್ಯಕ್ತಿಯಾಗಿವೆ. ಜಾನಪದ ಕಲಾವಿದರಿಗೆ ಮಾತೇ ಸಂಗೀತ, ಹೃದಯದ ಸ್ಪಂದನೆಯೇ ಸ್ವರ, ಅವರ ನಡೆ-ನುಡಿಯೇ ತಾಳ ಮತ್ತು ಲಯವಾಗಿದೆ. ಈ ಕಾರಣದಿಂದ ಜಾನಪದ ಕಲೆ ಜನಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿದೆ ಎಂದರು.

      ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ‌ಸಾಹಿತ್ಯ‌ ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಮೋಹನ್ ಅವರು ಮಾತನಾಡಿ ಪೂರ್ವಿಕರು ಉಳಿಸಿ, ಬೆಳೆಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೂ  ಸಂರಕ್ಷಿಸುವಂತಾಗಬೇಕು ಎಂದು ಕರೆ ನೀಡಿದರು.

      ಜಾನಪದ ಕಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಜಾನಪದ ಸಂಸ್ಕೃತಿ ಕಲೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಹಕಾರಿ ಎಂದು ಪೊನ್ನಚ್ಚನ ಮೋಹನ್ ಅವರು ಅಭಿಪ್ರಾಯ ಪಟ್ಟರು.

     ಉದ್ಯಮಿ ಜಯ ಚಿಣ್ಣಪ್ಪ ಮಾತನಾಡಿ, ಕೊಡಗು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಹೊಂದಿದೆ. ಇಲ್ಲಿನ ಹಾಡು ಮತ್ತು ನೃತ್ಯಗಳು ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಆಧುನಿಕ ಕಾಲಘಟ್ಟದಲ್ಲಿ ಯುವಕರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

     ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸೂಕ್ತ ಜಾಗ ಒದಗಿಸಬೇಕು. ಇದರಿಂದ ಜಿಲ್ಲೆಯ ಜಾನಪದ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
     ಉದ್ಯಮಿ ಜಯಂತಿ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಮೋಹನ್, ಪ್ರಕಾಶ್, ಟೋನಿ ಥಾಮಸ್, ಸುಜಲಾದೇವಿ, ಪ್ರಶಾಂತ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಉದ್ಯಮಿಗಳಾದ ಅವರೆಮಾದಂಡ ಶರಣ್ ಪೂಣಚ್ಚ, ಅರುಣ್ ಶೆಟ್ಟಿ, ಜಿಲ್ಲಾಡಳಿತದ ಕಾನೂನು ಸಲಹೆಗಾರ ಲೋಕೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ನಗರಸಭೆ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

       ಕಾರ್ಯಕ್ರಮದ ಸಂಚಾಲಕ ಅನಿಲ್ ಎಚ್.ಟಿ. ಸ್ವಾಗತಿಸಿದರು. ಪ್ರೇಮ ರಾಘವಯ್ಯ ಮತ್ತು ತಂಡದವರು ನಾಗಗೀತೆ ಹಾಡಿದರು. ಕೊಡಗು ಮಹಿಳಾ ಒಕ್ಕೂಟದ ತಂಡ ಪ್ರಾರ್ಥನಾ ಗೀತೆ ಹಾಡಿತು.

      ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ* :-

 ನಾಡಿನ ಮಣ್ಣಿನ ಸೊಗಡು, ಕಲೆ ಹಾಗೂ ಪರಂಪರೆಯ ಬಿಂಬಿಸುವ ವಿವಿಧ ಜಾನಪದ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.
    ಜಿಲ್ಲೆಯ ನಾನಾ ಮೂಲೆಗಳಿಂದ ಆಗಮಿಸಿದ್ದ ಖ್ಯಾತ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದ ಮೂಲಕ ಗಮನ ಸೆಳೆದರು. ಕಲಾವಿದ ಇ.ರಾಜು ತಂಡದವರು ಜಾನಪದ ಕಲಾ ಪ್ರದರ್ಶನ ನೀಡಿದರು.
     ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕಲಾಪ್ರೇಮಿಗಳು, ಯುವಜನರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಪಾರಂಪರಿಕ ವಸ್ತುಗಳ ಪ್ರದರ್ಶನ :-

 ಹಿರಿಯರು ಬಳಸುತ್ತಿದ್ದ ಅಪರೂಪದ ಪಾರಂಪರಿಕ ವಸ್ತುಗಳನ್ನು ಯುವಪೀಳಿಗೆಗೆ ಪರಿಚಯಿಸುವ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪಾರಂಪರಿಕ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು.
ಮನೆಯ ಬಳಕೆಯ ಪ್ರಾಚೀನ ಪರಿಕರಗಳಾದ ಮರದ ಒನಕೆ, ರೋಚಕ, ಬೀಸುವ ಕಲ್ಲು, ಹಿತ್ತಾಳೆಯ ಗಂಗಾಳ ಮತ್ತು ಬಿಂದಿಗೆಗಳು, ಮಣ್ಣಿನ ಮಡಕೆಗಳು ಹಾಗೂ ಪ್ರಾಚೀನ ಕಾಲದ ಅಡುಗೆ ಸಾಮಗ್ರಿಗಳು ನೋಡುಗರನ್ನು ಹಿಂದಿನ ಕಾಲಕ್ಕೆ ಕೊಂಡೊಯ್ದವು.
ಕೃಷಿ ಮತ್ತು ಕರಕುಶಲ ಉಪಕರಣಗಳಾದ ನೇಗಿಲು, ಕುಂಟೆ ರೈತರ ಶ್ರಮ ಮತ್ತು ಕೃಷಿ ಸಂಸ್ಕೃತಿಯನ್ನು ಪರಿಚಯಿಸಿದವು.

ಸಾಧಕರಿಗೆ ಸನ್ಮಾನ:
 ಕಾರ್ಯಕ್ರಮದಲ್ಲಿ ಕುಡವಚೇರಿರ ಎಸ್. ಉಮೇಶ್, ದುಗ್ಗಂಡ ಎಸ್. ರಿಕ್ಕಿ ಮುತ್ತಪ್ಪ ಹಾಗೂ ಜಾನಪದ ಪರಿಕರಗಳ ಸಂಗ್ರಹಕಾರರಾದ ಪೊನ್ನಚ್ಚನ ಮಧುಸೂದನ್ ಮತ್ತು ಪ್ರೀತು ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಳ್ಳಿಕಾರ್ ರಾಸುಗಳ ಪ್ರದರ್ಶನ :

 ಮಡಿಕೇರಿ ದಸರಾ ಸಮಿತಿ ಮತ್ತು ಮಡಿಕೇರಿ ಕ್ರೀಡಾ ಸಮಿತಿ ವತಿಯಿಂದ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಪ್ರಥಮ ವರ್ಷದ ರಾಜ್ಯ ಮಟ್ಟದ ಹೋರಿ ಪ್ರದರ್ಶನ ಗಮನ ಸೆಳೆಯಿತು.
      ನಾಡಿನ ಸಾಂಸ್ಕೃತಿಕ ಹಿರಿಮೆಯಲ್ಲಿ ಒಂದಾಗಿರುವ ಹಳ್ಳಿಕಾರ್ ಜಾನುವಾರಗಳ ಸಂರಕ್ಷಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಹಳ್ಳಿಕಾರ್ ರಾಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಕೃಷಿಕರು, ತಳಿ ಸಂವರ್ಧಕರು ಹಾಗೂ ಜಾನುವಾರು ಪ್ರೇಮಿಗಳು ಪ್ರದರ್ಶನಕ್ಕೆ ಸಾಕ್ಷಿಯಾದರು. ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಬಲಿಷ್ಠ ಹಳ್ಳಿಕಾರ್ ಎತ್ತುಗಳು, ಹೋರಿಗಳು ಹಾಗೂ ಕರುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದು, ನೆರೆದಿದ್ದವರ ಕಣ್ಮನ ಸೆಳೆದವು.