ಜಾತ್ರಾ ಮೈದಾನದ ಗುಡಿಸಲು ನಿವಾಸಿಗಳಿಗೆ ಕರವೇ ಸ್ವಾಭಿಮಾನಿ ಸೇನೆಯಿಂದ ಆಹಾರ ಕಿಟ್ ವಿತರಣೆ
admincoorgdaily

ಕುಶಾಲನಗರ: ಕುಶಾಲನಗರ ಜಾತ್ರಾ ಮೈದಾನದ ಗುಡಿಸಲು ನಿವಾಸಿಗಳ ಹಸಿವಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕ ಮಾನವೀಯತೆಯಿಂದ ಸ್ಪಂದಿಸಿದೆ.
ಜಾತ್ರಾ ಮೈದಾನದಲ್ಲಿ ಕಳೆದ 18-20 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿರುವ 8 ಅತ್ಯಂತ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್ ವಿತರಿಸಲಾಯಿತು. ದಾನಿಗಳ ಸಹಕಾರದೊಂದಿಗೆ ಈ ನೆರವು ನೀಡಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, "ಎರಡು ದಶಕಗಳಿಂದ ಕಷ್ಟದಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ನೆರವಾಗಿರುವುದು ತೃಪ್ತಿ ತಂದಿದೆ. ನಿಜವಾದ ನಿರ್ಗತಿಕರಿಗೆ ಸಹಾಯ ಮಾಡಿದಾಗ ದೇವರು ಒಳ್ಳೆಯದು ಮಾಡುತ್ತಾನೆ" ಎಂದರು.
"ಬಡವರ ಕಲ್ಯಾಣಕ್ಕೆ ನೆರವು ಕೇಳಿದಾಗಲೆಲ್ಲಾ ಕೂಪರ್ ಎಸ್ಟೇಟ್ ಮಾಲೀಕ ನಿಶಾಂತ್ ಅವರು ಮೊದಲ ಸಾಲಿನಲ್ಲಿ ನಿಂತು ಸಹಕರಿಸುತ್ತಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದ" ಎಂದು ಸ್ಮರಿಸಿದರು.
ಕಿಟ್ ಪಡೆದ ನಿವಾಸಿಯೊಬ್ಬರು ಭಾವುಕರಾಗಿ, "ಒಂದೊಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದೆವು. ಇದುವರೆಗೆ ಯಾರೂ ಈ ರೀತಿ ನೆರವಾಗಿರಲಿಲ್ಲ. ನಮ್ಮ ಹೊಟ್ಟೆ ತುಂಬಿಸಿದ ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಶೇಖರ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಗೌರವಾಧ್ಯಕ್ಷ ನಂಜಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರ, ಉಪಾಧ್ಯಕ್ಷ ನಾಸಿರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಮಹಿಳಾ ಘಟಕದ ಪ್ರ.ಕಾರ್ಯದರ್ಶಿ ಭವ್ಯ, ಸಂಘಟನಾ ಕಾರ್ಯದರ್ಶಿ ಖಾಸಿಂ, ಖಜಾಂಚಿ ಆಂತೋನಿ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜಾ, ಗೌರವಾಧ್ಯಕ್ಷೆ ನಾಗರತ್ನ, ಸಂಚಾಲಕ ವಿ.ಪಿ. ಚಂದ್ರಶೇಖರ್, ವಿಲ್ಸನ್, ಚಂದ್ರು, ಡ್ಯಾನಿಯಲ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
-