ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಚಾಲನೆ
admincoorgdaily


ಮಡಿಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಚಾಲನೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಸಮಾಜ ಸರಿದಾರಿಯಲ್ಲಿ ಸಾಗಬೇಕಾದರೆ ಪತ್ರಕರ್ತರ ಪಾತ್ರವೂ ಮುಖ್ಯವಾಗಿರುತ್ತದೆ. ರಾಜಕಾರಣಿಗಳಿಗೆ ಅಗತ್ಯ ಸಲಹೆ, ಮಾರ್ಗದರ್ಶನವನ್ನೂ ತಮ್ಮ ವರದಿಗಾರಿಕೆ ಮೂಲಕ ನೀಡುತ್ತಾರೆ. ಅದನ್ನು ನಾವುಗಳು ಸಕಾರಾತ್ಮಕವಾಗಿ ತೆಗೆದುಕೊಂಡಲ್ಲಿ ಸಮಾಜಕ್ಕೂ ಪ್ರಯೋಜನವಾಗುತ್ತದೆ ಎಂದರು.
ಪತ್ರಕರ್ತರು ಕ್ರೀಡಾಕೂಟದಲ್ಲಿಯೂ ಸಹ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಂತಾಗಬೇಕು. ಪತ್ರಕರ್ತರು ಪ್ರತಿನಿತ್ಯ ವೃತ್ತಿ ಜಂಜಾಟದಲ್ಲಿರುತ್ತಾರೆ. ಮಾನಸಿಕ ಮತ್ತು ದೈಹಿಕ ಚಟುವಟಿಕೆಗೆ ಸಹಕಾರಿ ಎಂದು ಹೇಳಿದರು.
ವೃತ್ತಿನಿರತ ಕ್ರೀಡಾಪಟುಗಳಿಗಿಂತಲೂ ಉತ್ತಮವಾಗಿ ಪತ್ರಕರ್ತರು ಕ್ರಿಕೆಟ್ ಆಡುತ್ತಿದ್ದನ್ನು, ಗಮನಿಸಿದೆ. ಅಷ್ಟು ಅದ್ಭುತವಾಗಿ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿರುವುದು ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ 23 ಜಿಲ್ಲೆಗಳಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಾಗೆಯೇ ಭಾವನಾತ್ಮಕ ಪುಳಕ ಸಹ ತಂದಿದೆ ಎಂದು ಸಚಿವರು ಹೇಳಿದರು.
‘ಹಿಂದೆ ಮನೆಗೆ ನೆಂಟರು ಬಂದಾಗ ಊಟ ಬಡಿಸಿ ಸಂತಸ ಪಡುತ್ತಿದ್ದ ದಿನಗಳನ್ನು ನೋಡಿದ್ದೇವೆ. ಅದೇ ರೀತಿ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿ ಹಬ್ಬದ ರೀತಿ ಭಾಗವಹಿಸಿರುವುದು ಶ್ಲಾಘನೀಯ. ಪತ್ರಕರ್ತರು ರಾಜ್ಯ ಮಟ್ಟದ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಸಂಘಟಿಸಿರುವುದಕ್ಕೆ ಶ್ಲಾಘನೀಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ ಕ್ರೀಡಾಕೂಟದಲ್ಲಿ ಸೋಲು ಗೆಲುವು ಸಹಜ.
ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಕ್ರೀಡಾಕೂಟ ಏರ್ಪಡಿಸುವಲ್ಲಿ ಹಲವರ ಪರಿಶ್ರಮವಿದ್ದು, ಕ್ರೀಡಾ ಉತ್ಸವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕ್ರೀಡಾಕೂಟಕ್ಕೆ ಪ್ರಾಯೋಜಕತ್ವ ಅತೀ ಮುಖ್ಯ. ಆ ನಿಟ್ಟಿನಲ್ಲಿ ಹಲವರು ಸಹಕಾರ ನೀಡಿದ್ದಾರೆ. ಮುಂದಿನ ಬಾರಿ ಚಿತ್ರದುರ್ಗ ಜಿಲ್ಲೆ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದ ಆತಿಥ್ಯ ವಹಿಸಲಿದೆ ಎಂದು ಘೋಷಿಸಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರವು ನಾಲ್ಕನೇ ಅಂಗವಾಗಿದೆ. ಆ ನಿಟ್ಟಿನಲ್ಲಿ ಕ್ರಿಕೆಟ್ ಜೊತೆಗೆ ಇತರೆ ಕ್ರೀಡೆಗಳಲ್ಲೂ ಸಹ ತೊಡಗಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಪತ್ರಕರ್ತರು ಇಲ್ಲಿನ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಲೇಖನಗಳನ್ನು ಬರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.
ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿರುವ ಪತ್ರಕರ್ತರು ನೆನಪನ್ನು ತೆಗೆದುಕೊಂಡು ಹೋಗಬೇಕು ಎಂದರು.
ಹಿರಿಯ ಪತ್ರಕರ್ತ ಎನ್.ರವಿಕುಮಾರ್ ಟೆಲಕ್ಸ್ ಮಾತನಾಡಿ, ರಾಜ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 12 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವ ಹೊಂದಿದ್ದು, ಕ್ರೀಡೆ, ಸಾಂಸ್ಕøತಿಕ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಕ್ರೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಮಾತನಾಡಿ ರಾಜ್ಯದ 23 ಜಿಲ್ಲೆಗಳಿಂದ 24 ತಂಡಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು, ವಿಶೇಷವಾಗಿದೆ. ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಭೆ ಸಮಾರಂಭ, ಸಮಾವೇಶಗಳನ್ನು ನಡೆಸಲಾಗುತ್ತಿದೆ. ಆದರೆ ಕ್ರೀಡಾಕೂಟ ಏರ್ಪಡಿಸುವುದು ವಿಭಿನ್ನವಾಗಿದೆ. ಪತ್ರಕರ್ತರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಆಗಮಿಸುವಂತಾಗಲು, ಜತೆಗೆ ಕ್ರೀಡಾಕೂಟದಿಂದ ಬಾಂಧವ್ಯ ಏರ್ಪಡಲು ಇದೊಂದು ಅವಕಾಶ ಎಂದು ಅನುಕಾರ್ಯಪ್ಪ ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಕ್ರೀಡಾಕೂಟಕ್ಕೆ ಸಹಕರಿಸಿದ ಸಚಿವ ನರೇಂದ್ರ ಸ್ವಾಮಿ, ಬಹುಮಾನ ಪ್ರಾಯೋಜಕರಾದ ರಿಪಬ್ಲಿಕ್ ನೆಟ್ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರಾದ ಬಿ.ಆರ್.ಸವಿತಾ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಮತ್ತಿಕರೆ ಜಯರಾಮ್, ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಪುಂಡಲೀಕ ಬಿ.ಬಾಳೋಜಿ, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ನಿಕಟ ಪೂರ್ವ ಉಪಾಧ್ಯಕ್ಷ ಭವಾನಿಸಿಂಗ್, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕ್ರೀಡಾ ಸಮಿತಿ ಸಂಚಾಲಕರಾದ ಸಂತೋಷ್ ರೈ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ತಹಶೀಲ್ದಾರ್ ಶ್ರೀಧರ, ವಾರ್ತಾಧಿಕಾರಿ, ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ಘಟಕದ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ಪದಾಧಿಕಾರಿಗಳು, ಇತರರು ಇದ್ದರು.
ವೀರಾಜಪೇಟೆ ಇಂಟೋಪೀಸ್ ಸಂಸ್ಥೆಯ ವಿದ್ಯಾರ್ಥಿಗಳು ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್ ಸ್ವಾಗತಿಸಿದರು. ವೀರಾಜಪೇಟೆ ತಾಲೂಕು ಅಧ್ಯಕ್ಷ ರಜಿತ್ ಕುಮಾರ್ ಗುಹ್ಯ ನಿರೂಪಿಸಿದರು. ವಿಷ್ಮ ಪೆಮ್ಮಯ್ಯ ವಂದಿಸಿದರು.
ಇಂದು ಫೈನಲ್;
2 ದಿನಗಳ ಕಾಲ ಆಯೋಜಿತ ಕ್ರಿಕೆಟ್ ಪಂದ್ಯಾಟದ ಸಮಾರೋಪ ತಾ. 3 ರಂದು (ಇಂದು) ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯ ನಂತರ ಫೈನಲ್ ಪಂದ್ಯಾಟ ನಡೆಯಲಿದ್ದು, ವಿಜೇತ ತಂಡಕ್ಕೆ ರೂ. 1 ಲಕ್ಷ, ರನ್ನರ್ ಅಪ್ ತಂಡಕ್ಕೆ ರೂ. 50 ಸಾವಿರ, ತೃತೀಯ ರೂ. 20 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ರೂ. 15 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ಬಹುಮಾನವನ್ನು ವಿತರಿಸಲಾಗುವುದು.