Kodagu

ಗಣಪತಿ ಕೊಡವ ಕೇರಿಯ ವಾರ್ಷಿಕ ಮಹಾಸಭೆ ಮತ್ತು ಒತ್ತೋರ್ಮೆ ಕೂಟ

admincoorgdaily

ಗಣಪತಿ ಕೊಡವ ಕೇರಿಯ ವಾರ್ಷಿಕ ಮಹಾಸಭೆ ಮತ್ತು ಒತ್ತೋರ್ಮೆ ಕೂಟ
ಮಡಿಕೇರಿ: ನಗರದ ಗಣಪತಿ ಕೊಡವ ಕೇರಿಯ ವಾರ್ಷಿಕ ಮಹಾಸಭೆ ಹಾಗೂ ಒತ್ತೋರ್ಮೆ ಕೂಟ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಕೇರಿಯ ಅಧ್ಯಕ್ಷ ಕಿರಿಯಮಾಡ ರತನ್ ಅವರು ಕೊಡವ ಸಮುದಾಯದ ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು. 

ಮಕ್ಕಳನ್ನು ಕೊಡವ ಸಮುದಾಯದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ಮೂಲಕ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಹಿರಿಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.

ಕೇರಿಯ ಕಾರ್ಯದರ್ಶಿ ಮಂಡೀರ ಸದಾ ಮುದ್ದಪ್ಪ ಅವರು ಕಳೆದ ಸಾಲಿನ ಲೆಕ್ಕಪತ್ರಗಳ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಪ್ರದಾಯಿಕ ಕೊಡವ ಊಟೋಪಚಾರದ ಮೂಲಕ ಒತ್ತೋರ್ಮೆ ಕೂಟದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.

ಕಲಿಯಂಡ ಸ್ಮಿತಾ ಪ್ರಾರ್ಥಿಸಿ, ಚೌಂಡಿರ ಗಂಗಮ್ಮ ವಂದಿಸಿದರು. ಉಪಾಧ್ಯಕ್ಷ ಚೆಂಬಂಡ ಸುರೇಶ್ ಮುತ್ತಪ್ಪ, ನಿರ್ದೇಶಕರಾದ ಕಲಿಯಂಡ ವಿನು, ಬಲ್ಲಚಂಡ ರೇಖಾ, ಚಿಲ್ಲುವಂಡ ಮಧು, ತೇಲಪಂಡ ಜಪ್ಪು, ಬಟ್ಟೀರ ರಾಜಪ್ಪ ಸೇರಿದಂತೆ ಕೊಡವ ಕೇರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.