ಬುಡಕಟ್ಟು ಸಂಸ್ಕೃತಿಯ ಸೊಬಗಿನಲ್ಲಿ ತಟ್ಟಳ್ಳಿ ಹಾಡಿಯಲ್ಲಿ ಗಣೇಶೋತ್ಸವ
admincoorgdaily

ಸಿದ್ದಾಪುರ:-ವಿರಾಜಪೇಟೆ ತಾಲ್ಲೂಕಿನ ತಟ್ಟಳ್ಳಿ,ದಿಡ್ಡಳ್ಳಿ ಹಾಡಿಯಲ್ಲಿ ಶ್ರೀ ಮುನೇಶ್ವರ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಗೌರಿ ಗಣೇಶೋತ್ಸವವನ್ನು ಹಾಡಿಯ ಜನರು ಒಗ್ಗಟ್ಟಿನಿಂದ ಹಾಗೂ ಸಂಭ್ರಮದಿಂದ ಆಚರಿಸಿದರು
ಗೌರಿ ಗಣೇಶೋತ್ಸವದ ಅಂಗವಾಗಿ ಹಾಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ರೀಡಾಕೂಟಗಳು ನಡೆದವು ವಿಶೇಷವಾಗಿ ಡಿಜೆ ಸಂಗೀತಕ್ಕೆ ಬದಲಾಗಿ ಹಾಡಿಯ ಸಾಂಪ್ರದಾಯಿಕ ತಮಟೆ, ಚಂಡೆ, ಬಿದಿರಿನ ಕೊಳಲು ಸೇರಿದಂತೆ ಸ್ಥಳೀಯ ಬುಡಕಟ್ಟು ವಾದ್ಯಗಳ ನಾದ ಮೊಳಗಿದ್ದು ಇಡೀ ಹಾಡಿಯಲ್ಲಿ ಹಬ್ಬದ ವಾತಾವರಣ ಮೂಡಿಸಿತು
ವಾದ್ಯಗಳ ಲಯಕ್ಕೆ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಒಂದಾಗಿ ಹೆಜ್ಜೆ ಹಾಕಿದರು
ವೃತ್ತಾಕಾರವಾಗಿ ನಿಂತು ಲಯಬದ್ಧವಾಗಿ ಕುಣಿದ ಹಾಡಿಯ ಜನರ ಸಾಂಪ್ರದಾಯಿಕ ನೃತ್ಯ ನೋಡುಗರ ಗಮನ ಸೆಳೆಯಿತು ಹಿರಿಯರಿಂದ ಮಕ್ಕಳವರೆಗೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು, ಹಾಡಿಯ ಸಂಸ್ಕೃತಿ ಮತ್ತು ಒಗ್ಗಟ್ಟಿನ ಅನಾವರಣಕ್ಕೆ ಸಾಕ್ಷಿಯಾಯಿತು
ಉತ್ಸವದ ಅಂಗವಾಗಿ ಎಲ್ಲರಿಗೂ ಅನ್ನದಾನ ಏರ್ಪಡಿಸಲಾಗಿತ್ತು
ಬಳಿಕ ಗೌರಿ ಗಣೇಶ ಮೂರ್ತಿಯ ಮೆರವಣಿಗೆ ಕಲ್ಲಳ, ಮಾಲ್ದಾರೆ, ಗುಡ್ಲೂರು ಹಾಗೂ ದಿಡ್ಡಳ್ಳಿ ಗ್ರಾಮಗಳ ಮೂಲಕ ಸಾಗಿತು ಹಾಡಿಯ ಜನರು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು
ನಂತರ ಬಳಿಜಟ್ಟಿ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು ಡಿಜೆ ಸಂಸ್ಕೃತಿಗೆ ಬದಲಾಗಿ ತಮ್ಮದೇ ಆದ ವಾದ್ಯ, ನೃತ್ಯ ಮತ್ತು ಸಂಪ್ರದಾಯದೊಂದಿಗೆ ಹಬ್ಬ ಆಚರಿಸಿದ ತಟ್ಟಳ್ಳಿ ಹಾಡಿಯ ಜನರ ಸಂಭ್ರಮ ವಿಶೇಷವಾಗಿತ್ತು.