ಮಾಲಂಬಿಯಲ್ಲಿ ವಿಜೃಂಭಣೆಯಿಂದ ನೆರವೇರಿದ ಗಣೇಶೋತ್ಸವ
admincoorgdaily

ಶನಿವಾರಸಂತೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಮೀಪದ ಮಾಲಂಬಿ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಮಾಲಂಬಿ ಜಂಕ್ಷನ್ ಬಸ್ಸು ತಂಗುದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
ಶನಿವಾರ ಮಧ್ಯಾಹ್ನ ಪ್ರತಿಷ್ಠಾಪನಾ ವೇದಿಕೆಯಲ್ಲಿ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಾಹನದಲ್ಲಿ ಹೂವಿನಿಂದ ಅಲಂಕರಿಸಿದ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕೂರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ರಾತ್ರಿ 8 ಗಂಟೆಯವರೆಗೂ ನಡೆದ ಶೋಭಾಯಾತ್ರೆಯಲ್ಲಿ ಸೇವಾ ಸಮಿತಿ ಸದಸ್ಯರು ಸೇರಿದಂತೆ ಭಕ್ತಾಧಿಗಳು, ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು. ನಂತರ ಮಾಲಂಬಿ ಗ್ರಾಮದ ಬಾಲ್ಗೇರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.