Kodagu

ಕ.ಸಾ.ಪ.ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ

admincoorgdaily

ಕ.ಸಾ.ಪ.ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ
ಕುಶಾಲನಗರ:  ಕುವೆಂಪು ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಮತ್ತು ಹಿರಿದಾದುದು. 

ಅವರ ಸಾಹಿತ್ಯವು ವಿಶ್ವಮಾನವ ಸಂದೇಶ, ವೈಚಾರಿಕತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಪ್ರಜ್ಞೆಯನ್ನು ಸಾರುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿಯೂ ಆದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಅಧ್ಯಾಪಕಿ ಬಿ.ಬಿ.ಹೇಮಲತಾ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ದಿವಂಗತ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 'ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಕೊಡುಗೆಗಳು' ಕುರಿತು ಉಪನ್ಯಾಸ ನೀಡಿದರು.
    ಕುವೆಂಪು ಅವರು ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು ಎಂದರು.

   ಕುವೆಂಪು ಅವರು
"ಓ ನನ್ನ ಚೇತನ, ಆಗು ನೀ ಅನಿಕೇತನ" ಎಂಬ ತತ್ವದ ಮೂಲಕ ಮನುಜಮತ, ವಿಶ್ವಪಥದ ಪರಿಕಲ್ಪನೆಯನ್ನು ನೀಡಿದ್ದಾರೆ  ಎಂದರು.
ರಾಷ್ಟ್ರಕವಿ ಕುವೆಂಪು  ಅವರು ಕನ್ನಡ ಸಾಹಿತ್ಯ ಲೋಕದ ಪ್ರಕೃತಿ ಕವಿ ಮತ್ತು ರಸಕವಿ ಎಂದು ಪ್ರಸಿದ್ಧರಾಗಿದ್ದಾರೆ. ಇವರ ಸಾಹಿತ್ಯಕ್ಕೂ ಪ್ರಕೃತಿಗೂ ಇರುವ ಸಂಬಂಧ ಅನನ್ಯವಾದುದು ಎಂದು ಹೇಮಲತಾ ಬಣ್ಣಿಸಿದರು.

   ಮಲೆನಾಡಿನ ಪ್ರಭಾವ: 

ಕುವೆಂಪು ಅವರು ಜನಿಸಿ ಬೆಳೆದದ್ದು ಮಲೆನಾಡಿನ ಸೊಬಗಿನ ಕುಪ್ಪಳ್ಳಿಯಲ್ಲಿ. ಅಲ್ಲಿನ ದಟ್ಟ ಅರಣ್ಯ, ಮಳೆ, ಬೆಟ್ಟ-ಗುಡ್ಡಗಳು, ನದಿಗಳು ಮತ್ತು ಪಕ್ಷಿಗಳ ಚಿಲಿಪಿಲಿ ಸದ್ದು ಅವರ ಬಾಲ್ಯವನ್ನು ಆವರಿಸಿಕೊಂಡಿದ್ದವು. ಇದು ಅವರ ಕಾವ್ಯಕ್ಕೆ ಜೀವ ತುಂಬಿತು ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕನ್ನಡ ನಾಡು- ನುಡಿ, ಕಲೆ ಮತ್ತು ಸಂಸ್ಕೃತಿಯು ಎರಡು ಸಾವಿರ ವರ್ಷಗಳಿಗೂ ಅಧಿಕ ಭವ್ಯ ಇತಿಹಾಸವನ್ನು ಹೊಂದಿದೆ. ಇದರ ಸಂರಕ್ಷಣೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು.

 ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆ ಜತೆಗೆ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡವು ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದ್ದು, ಶ್ರೀಮಂತ ವ್ಯಾಕರಣ ಮತ್ತು ಶಬ್ಧಕೋಶವನ್ನು ಹೊಂದಿದೆ ಎಂದರು.

    ಕನ್ನಡ ದತ್ತಿ  ಉಪನ್ಯಾಸ ಕಾರ್ಯಕ್ರಮಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸಲು ಹಾಗೂ ಹಿರಿಯ ಚೇತನಗಳನ್ನು ಸ್ಮರಿಸಲು ನಡೆಸುವ ವಿಶೇಷ ಸಾಹಿತ್ಯಿಕ ಕಾರ್ಯಕ್ರಮಗಳಾಗಿವೆ ಎಂದು ಕೇಶವಕಾಮತ್ ಹೇಳಿದರು.

  ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ.
ವಿದ್ಯಾರ್ಥಿಗಳು  ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು 
 ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

   ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಕುವೆಂಪು ಅವರು ಕೇವಲ ಮಹಾನ್ ಕವಿಗಳು ಮಾತ್ರವಲ್ಲದೆ, ಸಮಾಜದಲ್ಲಿದ್ದ ಮೌಢ್ಯಗಳು, ಜಾತಿ ಪದ್ಧತಿ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಹರಿಕಾರರು ಮತ್ತು ಮಾನವತವಾದಿಯಾಗಿದ್ದಾರೆ. ಅವರ ವೈಚಾರಿಕ ಪ್ರಜ್ಞೆಯು ಸಮಾಜದ ಕಣ್ತೆರೆಸಿದೆ ಎಂದರು.

   ಪ್ರಬಂಧ ಸ್ಪರ್ಧೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ  ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ 
ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ.ಶಾಂತಿ, ಮನುಷ್ಯನನ್ನು ಮನುಷ್ಯನಾಗಷ್ಟೇ ಕಾಣಬೇಕು ಎಂಬ ಶುದ್ಧ ಮಾನವತಾವಾದ
ವನ್ನು ಮಂಡಿಸಿದರು. "ಮನುಜಮತ ವಿಶ್ವಪಥ" ಎಂಬ ದಿವ್ಯ ಮಂತ್ರವನ್ನು ಜಗತ್ತಿಗೆ ಸಾರಿದರು ಎಂದು ಬಣ್ಣಿಸಿದರು.

 ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿ 
ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ವೈಚಾರಿಕತೆ ಕುರಿತು ಮಾತನಾಡಿದ
ದತ್ತಿ ಉಪನ್ಯಾಸದ ದಾನಿಯೂ ಆದ ಶಿಕ್ಷಕಿ ಸ್ನೇಹ ಬಸಮ್ಮ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
  ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತು ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಡಿ.ರಾಜ, ಕರ್ನಾಟಕದ ಏಕೀಕರಣದ ಹೋರಾಟದ ಮಜಲುಗಳ ಬಗ್ಗೆ ವಿವರಿಸಿದರು.  

ಕಸಾಪ
ತಾಲ್ಲೂಕು  ಕೋಶಾಧಿಕಾರಿ ಕೆ.ವಿ.ಉಮೇಶ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ,
ಉಪನ್ಯಾಸಕ ಫಿಲಿಪ್ ವಾಸ್,
ಕಾಲೇಜಿನ ಗ್ರಂಥಪಾಲಕ ಎಸ್.ನಂದೀಶ್ ಇದ್ದರು.

ಕನ್ನಡ ಉಪನ್ಯಾಸಕಿ ಎಂ.ಎಚ್,ಸೋನಿಯ ನಿರ್ವಹಿಸಿದರು. ಉಪನ್ಯಾಸಕ
ಕೆ.ಎಲ್.ಅವಿನಾಶ್ ಸ್ವಾಗತಿಸಿದರು.ಉಪನ್ಯಾಸಕ
ಪ್ರಮೋದ್ ವಂದಿಸಿದರು.
ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.