Kodagu

ವಾರ ಕಳೆದರೂ ಕಸ ವಿಲೇವಾರಿ ಇಲ್ಲ - ಶನಿವಾರಸಂತೆಯಲ್ಲಿ ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

admincoorgdaily

ವಾರ ಕಳೆದರೂ ಕಸ ವಿಲೇವಾರಿ ಇಲ್ಲ - ಶನಿವಾರಸಂತೆಯಲ್ಲಿ ಗ್ರಾ.ಪಂ. ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ
ಶನಿವಾರಸಂತೆ: ಪಟ್ಟಣದ ಕೆಲವು ಕಡೆಗಳಲ್ಲಿ ವಾರ ಕಳೆದರೂ ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಹಾಗೆ ಬಿಟ್ಟಿದ್ದು, ಇದಕ್ಕೆ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ. ಚುನಾವಣೆ ನಡೆಯುವ ವರೆಗೂ ಗ್ರಾ.ಪಂ. ಆಡಳಿತಾಧಿಕಾರಿಯವರು ಗ್ರಾ.ಪಂ.ಯ ಮುಖ್ಯಸ್ಥರಾಗಿರುತ್ತಾರೆ. ಗ್ರಾ.ಪಂ.ಯ ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ಗ್ರಾ.ಪಂ.ಯನ್ನು ಮುನ್ನಡೆಸುತ್ತಾರೆ. ಆದರೆ ಶನಿವಾರಸಂತೆ ಪಟ್ಟಣದಲ್ಲಿ ಸರಿಯಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಅಲ್ಲಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ.

ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಬೈಪಾಸ್ ರಸ್ತೆಯಲ್ಲಿರುವ ಪತ್ರಕರ್ತರ ಸಂಘದ ಕಚೇರಿ ಮುಂಭಾಗ ಕಳೆದ ವಾರ ನಡೆದ ಸಂತೆಯಲ್ಲಿ ಕಬ್ಬಿನ ಹಾಲು ವ್ಯಾಪಾರಿಗಳು ಕಬ್ಬಿನ ಸಿಪ್ಪಿಯನ್ನು ರಾಶಿ ಹಾಕಿದ್ದರು. ಆ ತ್ಯಾಜ್ಯವನ್ನು ಸಂಬಂಧಪಟ್ಟ ಕಾರ್ಮಿಕರು ವಿಲೇವಾರಿ ಮಾಡಿಲ್ಲ. 2 ವಾರ ಸಂತೆ ನಡೆದು ಹೋಗಿದ್ದರೂ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಹಾಗೇ ಬಿಟ್ಟಿದ್ದಾರೆ. ಸಂಬಂಧಪಟ್ಟ ಗ್ರಾ.ಪಂ. ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹರೀಶ್ ಹೇಳುತ್ತಾರೆ.