Kodagu

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಗೆ ಮತ್ತೊಮ್ಮೆ ಅವಕಾಶ ನೀಡಿ; ಕನ್ನಡಸಿರಿ ಸ್ನೇಹ ಬಳಗ ಆಗ್ರಹ

admincoorgdaily

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್ ಸಾಗರ್ ಗೆ ಮತ್ತೊಮ್ಮೆ ಅವಕಾಶ ನೀಡಿ; ಕನ್ನಡಸಿರಿ ಸ್ನೇಹ ಬಳಗ ಆಗ್ರಹ
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಲೋಕೇಶ್ ಸಾಗರ್ ಅವರಿಗೆ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕನ್ನಡಸಿರಿ ಸ್ನೇಹ ಬಳಗ ಆಗ್ರಹಿಸಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪದಾಧಿಕಾರಿ ರಂಗಸ್ವಾಮಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿವಿಗಾಗಿ ಲೋಕೇಶ್ ಸಾಗರ್ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಬದ್ಧತೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ ಎಂದರು.

ಸುವರ್ಣ ಕರ್ನಾಟಕದ ಪ್ರಯುಕ್ತ ಬಳಗದ ವತಿಯಿಂದ 50 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯವೈಖರಿಯನ್ನು ಮೆಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸಿವೆ ಎಂದು ಅವರು ತಿಳಿಸಿದರು.

ಪದಾಧಿಕಾರಿ ಪಿ.ಎಸ್.ಶೈಲೇಶ್ ಮಾತನಾಡಿ, 2016ರಿಂದ 2021ರ ಅವಧಿಯಲ್ಲಿ ಜಿಲ್ಲಾ ಪರಿಷತ್ತು ರಾಜ್ಯಮಟ್ಟದಲ್ಲಿ ಗಮನ ಸೆಳೆಯುವಂತಹ ಕೆಲಸ ಮಾಡಿದೆ. ಜಿಲ್ಲೆಯ 8 ಕಡೆ ತಾಲ್ಲೂಕು ಮಟ್ಟದ ಮತ್ತು 5 ಕಡೆ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.

ಕೆ.ಎಸ್.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ 3,650 ಸದಸ್ಯರಿದ್ದು, ಎಲ್ಲರೂ ಲೋಕೇಶ್ ಸಾಗರ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕುಡೆಕಲ್ಲು ಸಂತೋಷ್, ಮಲ್ಲಪ್ಪ, ಜವರಪ್ಪ ಉಪಸ್ಥಿತರಿದ್ದರು.